ನವದೆಹಲಿ: ಸ್ವಾತಂತ್ರ್ಯ ಹೋರಾಟಗಾರ ವಿನಾಯಕ ದಾಮೋದರ ಸಾವರ್ಕರ್ ಅವರ ಹೆಸರನ್ನು 'ಲಾಂಛನಗಳು ಮತ್ತು ಹೆಸರುಗಳು(ಅನುಚಿತ ಬಳಕೆ ತಡೆಗಟ್ಟುವಿಕೆ) ಕಾಯ್ದೆ, 1950'ರ ಅಡಿಯಲ್ಲಿ ಸೇರಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ವಜಾಗೊಳಿಸಿದೆ.
ನ್ಯಾ.ಬಿ.ಆರ್.ಗವಾಯಿ ಹಾಗೂ ನ್ಯಾ.ಆಗಸ್ಟೀನ್ ಜಾರ್ಜ್ ಮಾಸಿಹ್ ಅವರಿದ್ದ ಪೀಠವು, 'ಈ ಪ್ರಕರಣದಲ್ಲಿ ಅರ್ಜಿದಾರರ ಮೂಲಭೂತ ಹಕ್ಕುಗಳಿಗೆ ಯಾವುದೇ ರೀತಿಯ ಚ್ಯುತಿಯಾಗಿಲ್ಲವಾದ್ದರಿಂದ ಅರ್ಜಿಯನ್ನು ತಿರಸ್ಕರಿಸಲಾಯಿತು' ಎಂದು ಹೇಳಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು 'ಸಂವಿಧಾನದ 51ಎ ವಿಧಿಯ ಅಡಿಯಲ್ಲಿ 'ಮೂಲಭೂತ ಕರ್ತವ್ಯ'ಗಳಿಗೆ ಅಡ್ಡಿಪಡಿಸಿದ ಆಧಾರದಲ್ಲಿ ಅರ್ಜಿ ಸಲ್ಲಿಸಲಾಗಿದೆ' ಎಂದು ಅರ್ಜಿದಾರ ನ್ಯಾಯಾಲಯಕ್ಕೆ ತಿಳಿಸಿದರು.
'ಸಾವರ್ಕರ್ ಅವರ ಕುರಿತು ಸತತ 30 ವರ್ಷಗಳಿಂದ ಸಂಶೋಧನೆ ನಡೆಸುತ್ತಿದ್ದು, ಅವರ ಕುರಿತು ಕೆಲವು ಸಂಗತಿಗಳನ್ನು ಕಾನೂನುಬದ್ಧವಾಗಿಸುವ ಅವಕಾಶಕ್ಕಾಗಿ ಕೋರಿ ಅರ್ಜಿ ಸಲ್ಲಿಸಲಾಗಿತ್ತು' ಎಂದು ಮನವಿ ಮಾಡಿದರು.
ಲಾಂಛನಗಳು ಮತ್ತು ಹೆಸರುಗಳು(ಅನುಚಿತ ಬಳಕೆ ತಡೆಗಟ್ಟುವಿಕೆ) ಕಾಯ್ದೆ, 1950'ರ ಅಡಿಯಲ್ಲಿ ಸಾವರ್ಕರ್ ಅವರ ಹೆಸರು ಸೇರಿಸಲು
ಭಾರತ ಸರ್ಕಾರ ಹಾಗೂ ಗೃಹ ಸಚಿವಾಲಯಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದರು.
ವೃತ್ತಿಪರ ಹಾಗೂ ವಾಣಿಜ್ಯ ಉದ್ದೇಶಗಳಿಗಾಗಿ ಕೆಲವು ನಿರ್ದಿಷ್ಟ ಲಾಂಛನಗಳು ಹಾಗೂ ಹೆಸರುಗಳ ಅನುಚಿತ ಬಳಕೆಯನ್ನು ತಡೆಗಟ್ಟಲು 1950ರ ಕಾಯ್ದೆಯಲ್ಲಿ ಹೆಸರನ್ನು ಸೇರಿಸಲಾಗುತ್ತದೆ.




