ನವದೆಹಲಿ: ಚುನಾವಣೆಗೆ ಸಂಬಂಧಿಸಿದಂತೆ ಒಂದೇ ವೇದಿಕೆಯಲ್ಲಿ ಸಮಗ್ರ ಮಾಹಿತಿ ಹಾಗೂ ಸೇವೆ ಒದಗಿಸುವ ಹೊಸ ಕಿರು ತಂತ್ರಾಂಶ (ಆಯಪ್) ಬಿಡುಗಡೆಗೊಳಿಸಲು ಭಾರತೀಯ ಚುನಾವಣಾ ಆಯೋಗವು ಸಿದ್ಧತೆ ನಡೆಸಿದೆ.
ಮತದಾರರು, ರಾಜಕೀಯ ಪಕ್ಷಗಳು ಹಾಗೂ ಅಧಿಕಾರಿಗಳಿಗೆ ನೂತನ ಆಯಪ್‌ನಲ್ಲಿ ಮಾಹಿತಿ ಸಿಗಲಿದ್ದು, ಈಗಿರುವ 40 ಮೊಬೈಲ್ ಅಪ್ಲಿಕೇಷನ್‌ಗಳು ಒಂದೇ ಆಯಪ್‌ನಲ್ಲಿ ಸಂಯೋಜನೆಗೊಳ್ಳಲಿವೆ ಎಂದು ಆಯೋಗವು ತಿಳಿಸಿದೆ.
ಆಯೋಗಕ್ಕೆ ಸಂಬಂಧಿಸಿದಂತೆ ಯಾವುದೇ ಕೆಲಸ ಮಾಡಲು ಪ್ರತ್ಯೇಕ ಆಯಪ್ ಡೌನ್‌ಲೋಡ್ ಮಾಡಿ, ಲಾಗಿನ್ ಮಾಡಬೇಕಾದ ಅನಿವಾರ್ಯ ಇತ್ತು. ಈ ಸಮಸ್ಯೆ ಕೊನೆಗಾಣಿಸಲು, ಹೊಸ ಆಯಪ್ ಅಭಿವೃದ್ಧಿಪಡಿಸಲಾಗುವುದು ಎಂದು ಮುಖ್ಯ ಆಯುಕ್ತ ಗ್ಯಾನೇಶ್ ಕುಮಾರ್ ಅವರು ಇತ್ತೀಚಿಗೆ ತಿಳಿಸಿದ್ದರು.
'ಇಸಿಐನೆಟ್' ಆಯಪ್ ಸ್ಮಾರ್ಟ್‌ಫೋನ್ ಜೊತೆಗೆ ಡೆಸ್ಕ್‌ಟಾಪ್‌ನಲ್ಲಿ ಲಭ್ಯವಾಗಲಿದೆ. ಚುನಾವಣೆಗೆ ಸಂಬಂಧಿಸಿದಂತೆ ಅಧಿಕೃತ ಅಂಕಿಅಂಶಗಳನ್ನು ಆಯೋಗವೇ ಪರಿಷ್ಕರಿಸಲಿದ್ದು, ಸಾಧ್ಯವಾದಷ್ಟು ನಿಖರ ಮಾಹಿತಿಯನ್ನು ಪಡೆಯಬಹುದಾಗಿದೆ. ಸಮಸ್ಯೆ ಸೃಷ್ಟಿಯಾದರೆ, ಶಾಸನಬದ್ಧವಾದ ನಮೂನೆಗಳಲ್ಲಿ ಭರ್ತಿ ಮಾಡಿದ ಪ್ರಾಥಮಿಕ ದತ್ತಾಂಶಗಳೇ ಮಾನ್ಯವಾಗಿ ಇರಲಿವೆ ಎಂದು ಆಯೋಗವು ಸ್ಪಷ್ಟಪಡಿಸಿದೆ.
ಚುನಾವಣೆಗೆ ಸಂಬಂಧಿಸಿದಂತೆ, ಈಗ 'ವೋಟರ್ ಹೆಲ್ಪ್‌ಲೈನ್', ವೋಟರ್ ಟರ್ನ್‌ಔಟ್ ಆಯಪ್, ಸಿವಿಜಿಲ್, ಸುವಿಧಾ, ಸಕ್ಷಮ್ ಹಾಗೂ ಕೆವೈಸಿ ಆಯಪ್‌ಗಳಿವೆ. ಈ ಎಲ್ಲವೂ ಸೇರಿ, 5.5 ಕೋಟಿ ಆಯಪ್‌ಗಳು ಡೌನ್‌ಲೋಡ್ ಆಗಿವೆ.




