ಕಾಸರಗೋಡು: ಮಿನಿಬಸ್ ಹಾಗೂ ಬೈಕ್ ಡಿಕ್ಕಿಯಾಗಿ ಮಕ್ಕಳಿಬ್ಬರು ಮೃತಪಟ್ಟ ಪ್ರಕರಣದಲ್ಲಿ ಮಿನಿಬಸ್ ಚಾಲಕ ಮಂಜೇಶ್ವರ ನಿವಾಸಿ ಗೌತಮ್(30)ಎಂಬಾತನಿಗೆ ಕಾಸರಗೋಡು ಚೀಫ್ ಜ್ಯುಡಿಶಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
2018ರಲ್ಲಿ ಅಡ್ಕತ್ತಬೈಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ಮತ್ತು ಮಿನಿಬಸ್ ಡಿಕ್ಕಿಯಾಗಿ ಮೊಗ್ರಾಲ್‍ಪುತ್ತೂರು ಸನಿಹದ ನಿವಾಸಿ ಎ.ಕೆ ರಜೀಸ್ ಎಂಬವರ ಮಕ್ಕಳಾದ ಇಬ್ರಾಹಿಂ ಹಾಶಿಂ(7)ಹಾಗೂ ಮಹಮ್ಮದ್ ಮಿನಾಸ್(ನಾಲ್ಕುವರೆ ವರ್ಷ)ಮೃತಪಟ್ಟಿದ್ದರು. ರಜೀಸ್ ತನ್ನ ಇಬ್ಬರು ಮಕ್ಕಳೊಂದಿಗೆ ಬೈಕಲ್ಲಿ ಸಂಚರಿಸುತ್ತಿದ್ದ ಸಂದರ್ಭ ಮಿನಿಬಸ್ ಡಿಕ್ಕಿಯಾಗಿದ್ದು, ಮಕ್ಕಳಿಬ್ಬರು ಮೃತಪಟ್ಟಿದ್ದರೆ, ರಜೀಸ್ ಗಾಯಗಳೊಂದಿಗೆ ಪಾರಾಗಿದ್ದರು. ಈ ಬಗ್ಗೆ ಕಾಸರಗೋಡು ನಗರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು.




