ವಾಷಿಂಗ್ಟನ್: ಉಭಯ ದೇಶಗಳ ನಡುವಣ ರಕ್ಷಣಾ ಕಾರ್ಯತಂತ್ರದ ಭಾಗವಾಗಿ ₹ 11 ಸಾವಿರ ಕೋಟಿ ಮೊತ್ತದ ನಿರ್ಣಾಯಕ ಸೇನಾ ಸಾಮಗ್ರಿಗಳ ಪೂರೈಕೆ ಪ್ರಸ್ತಾವನೆಯನ್ನು ಅಮೆರಿಕ ಅನುಮೋದಿಸಿದೆ.
ಪೆಂಟಗಾನ್ ಅಡಿಯಲ್ಲಿ ಕಾರ್ಯನಿರ್ವಹಿಸುವ ರಕ್ಷಣಾ ಭದ್ರತಾ ಸಹಕಾರ ಸಂಸ್ಥೆ (ಡಿಎಸ್‌ಸಿಎ), ಶಸ್ತ್ರಾಸ್ತ್ರ ಸರಬರಾಜುಗಳಿಗೆ ಅಗತ್ಯವಾದ ಪ್ರಮಾಣಪತ್ರಗಳನ್ನು ಪೂರೈಸಿದ್ದು, ಸಂಭವನೀಯ ಮಾರಾಟದ ಕುರಿತು ಯುಎಸ್ ಕಾಂಗ್ರೆಸ್‌ಗೆ ಮಾಹಿತಿ ನೀಡಿರುವುದಾಗಿ ಹೇಳಿಕೆ ಬಿಡುಗಡೆ ಮಾಡಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದೊಂದಿಗಿನ ರಕ್ಷಣಾ ಸಹಕಾರಕ್ಕೆ ಪ್ರೋತ್ಸಾಹ ನೀಡುತ್ತಿರುವ ನಡುವೆಯೇ ಈ ಅನುಮೋದನೆ ದೊರೆತಿದೆ.
ಪ್ರಸ್ತಾವಿತ ಸರಬರಾಜು ಇಂಡೋ-ಪೆಸಿಫಿಕ್ ಪ್ರದೇಶ ಜಾಗೃತಿ ಕಾರ್ಯಕ್ರಮದ ಚೌಕಟ್ಟಿನಲ್ಲಿ ಭಾರತ ಹಾಗೂ ಅಮೆರಿಕ ಹೊಂದಿರುವ ಸಹಕಾರಕ್ಕೆ ಸಂಬಂಧಿಸಿದ್ದಾಗಿದೆ.
ಸಂಬಂಧಿತ ಸವಾಲುಗಳಿಗೆ ಪ್ರತಿಕ್ರಿಯಿಸುವ ವಿದೇಶಿ ಭದ್ರತಾ ಸಾಮರ್ಥ್ಯವನ್ನು ವೃದ್ಧಿಸುವ ಮೂಲಕ ವಿದೇಶಾಂಗ ನೀತಿಯನ್ನು ಹಾಗೂ ಅಮೆರಿಕದ ರಾಷ್ಟ್ರೀಯ ಭದ್ರತಾ ಸಾಮರ್ಥ್ಯವನ್ನು ಸುಧಾರಿಸುವುದು ಡಿಎಸ್‌ಸಿಎ ಧ್ಯೇಯವಾಗಿದೆ.
'ಇಂಡೋ-ಪೆಸಿಫಿಕ್ ಪ್ರದೇಶ ಜಾಗೃತಿ ಕಾರ್ಯಕ್ರಮ ಸಂಬಂಧಿತ ಅಂದಾಜು ₹ 11 ಸಾವಿರ ಕೋಟಿ (131 ಮಿಲಿಯನ್ ಡಾಲರ್) ಮೊತ್ತದ ರಕ್ಷಣಾ ಸಲಕರಣೆಗಳನ್ನು ಭಾರತಕ್ಕೆ ಮಾರಾಟ ಮಾಡಲು ವಿದೇಶಾಂಗ ಇಲಾಖೆ ಅನುಮೋದಿಸಿದೆ' ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್‌ನಲ್ಲಿ ಉಗ್ರರು ಗುಂಡಿನ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ 26 ಪ್ರವಾಸಿಗರು ಮೃತಪಟ್ಟು, 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಈ ಘಟನೆ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವಣ ಸಂಬಂಧ ಮತ್ತಷ್ಟು ಹಳಸಿದೆ.




