ನವದೆಹಲಿ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರ ದಾಳಿ ಬಳಿಕ ಭಾರತ ಸರ್ಕಾರದ ಆದೇಶದಂತೆ ಅಲ್ಪಾವಧಿ ವೀಸಾ ಹೊಂದಿದ್ದ ಪಾಕಿಸ್ತಾನಿಯರು ಭಾರತ ಬಿಟ್ಟು ತೆರಳುವ ಪ್ರಕ್ರಿಯೆ ಆರಂಭವಾಗಿತ್ತು. ಇದರಿಂದ ಭಾರತ ಮತ್ತು ಪಾಕಿಸ್ತಾನ ನಡುವಿನ ಅಟ್ಟಾರಿ- ವಾಘಾ ಗಡಿಯಲ್ಲಿ ಕಳೆದ ಒಂದು ವಾರದಿಂದ ಜನಸಂದಣಿಯಿತ್ತು.
ಆದರೆ ಗುರುವಾರ ಗಡಿಯನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಪಿಟಿಐ ವರದಿ ತಿಳಿಸಿದೆ.
ಗಡಿಯನ್ನು ಬಂದ್ ಮಾಡಿದ ಕಾರಣ ಗುರುವಾರ ಯಾವೊಬ್ಬ ನಾಗರಿಕ ಕೂಡ ಗಡಿಯನ್ನು ದಾಟಲಿಲ್ಲ ಎಂದು ಮೂಲಗಳು ತಿಳಿಸಿವೆ.
ಪಾಕ್ ವೀಸಾ ಹೊಂದಿದ್ದ 15 ಭಾರತೀಯರು ಸೇರಿ, ಬುಧವಾರ ಅಟ್ಟಾರಿ-ವಾಘಾ ಗಡಿ ಮೂಲಕ 125 ಪಾಕಿಸ್ತಾನಿಯರು ಭಾರತವನ್ನು ಬಿಟ್ಟಿದ್ದಾರೆ. ಕಳೆದ ಏಳು ದಿನಗಳಲ್ಲಿ ಒಟ್ಟು 911 ಪಾಕಿಸ್ತಾನಿಯರು ಗಡಿ ದಾಟಿದ್ದಾರೆ.
ಇದೇ ರೀತಿ ದೀರ್ಘಾವಧಿ ಭಾರತದ ವೀಸಾ ಹೊಂದಿದ್ದ 73 ಪಾಕ್ ನಾಗರಿಕರು ಸೇರಿ 152 ಭಾರತೀಯರು ಇದೇ ಗಡಿ ಮೂಲಕ ಸ್ವದೇಶಕ್ಕೆ ಮರಳಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.




