HEALTH TIPS

ರಫೇಲ್‌ ಹಾರಾಟ ನಡೆಸುವ ಮಹಿಳೆಗೆ ಕಾನೂನು ವಿಭಾಗದಲ್ಲಿ ತಾರತಮ್ಯವೇಕೆ?: 'ಸುಪ್ರೀಂ'

ನವದೆಹಲಿ: 'ಭಾರತೀಯ ವಾಯುಪಡೆಯಲ್ಲಿ ಮಹಿಳೆ ರಫೇಲ್‌ ಯುದ್ಧವಿಮಾನ ಹಾರಾಟ ನಡೆಸುವ ಸಾಮರ್ಥ್ಯ ಹೊಂದಿದ್ದಾಳೆ. ಆದರೆ, ಸೇನೆಯ ಜಡ್ಜ್‌ ಅಡ್ವೋಕೇಟ್‌ ಜನರಲ್ (ಜೆಎಜಿ) ವಿಭಾಗದಲ್ಲಿ ಮಹಿಳೆಯರನ್ನು ಕಡಿಮೆ ಸಂಖ್ಯೆಯಲ್ಲಿ ನೇಮಕ ಮಾಡಲಾಗಿದೆ. ಈ ತಾರತಮ್ಯ ಏಕೆ? ಎಂದು ಸುಪ್ರೀಂ ಕೋರ್ಟ್‌ ಅಚ್ಚರಿ ವ್ಯಕ್ತಪಡಿಸಿದೆ.

ಸೇನೆಯಲ್ಲಿ ನೇಮಕಾತಿಗೆ ಸಂಬಂಧಿಸಿ 50:50 ಅನುಪಾತ ಸೂತ್ರ ಅನುಸರಿಸುತ್ತಿರುವುದರ ಹಿಂದಿನ ತರ್ಕವೇನು ಎಂದೂ ಸುಪ್ರೀಂ ಕೋರ್ಟ್‌ ಪ್ರಶ್ನಿಸಿದೆ.

ನ್ಯಾಯಮೂರ್ತಿಗಳಾದ ದೀಪಾಂಕರ ದತ್ತಾ ಹಾಗೂ ಮನಮೋಹನ್‌ ಅವರು ಇದ್ದ ನ್ಯಾಯಪೀಠವು, ಸೇನೆಯ ಅಧಿಕಾರಿಗಳಾದ ಅರ್ಶನೂರ್ ಕೌರ್ ಹಾಗೂ ಆಸ್ಥಾ ತ್ಯಾಗಿ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಇತ್ತೀಚೆಗೆ ನಡೆಸಿದ ವೇಳೆ ಈ ಮಾತು ಹೇಳಿದೆ. ಪ್ರಕರಣ ಕುರಿತ ತೀರ್ಪನ್ನು ನ್ಯಾಯಪೀಠ ಮೇ 8ರಂದು ಕಾಯ್ದಿರಿಸಿದೆ.

ಅರ್ಶನೂರ್ ಹಾಗೂ ಆಸ್ಥಾ ಅವರು ಕ್ರಮವಾಗಿ 4 ಹಾಗೂ 5ನೇ ರ‍್ಯಾಂಕ್‌ ಪಡೆದಿದ್ದರು. ಈ ಹುದ್ದೆಗೆ ನೇಮಕಕ್ಕಾಗಿ ನಡೆದ ಪರೀಕ್ಷೆಯಲ್ಲಿ ಈ ಇಬ್ಬರು, ಪುರುಷ ಅಧಿಕಾರಿಗಳಿಗಿಂತಲೂ ಹೆಚ್ಚಿನ ರ‍್ಯಾಂಕ್‌ ಪಡೆದಿದ್ದರು. ಆದಾಗ್ಯೂ ಈ ಇಬ್ಬರು ಮಹಿಳಾ ಅಧಿಕಾರಿಗಳನ್ನು ಜೆಎಜಿ ಹುದ್ದೆಗೆ ಆಯ್ಕೆ ಮಾಡಿರಲಿಲ್ಲ. ಈ ನಡೆಯನ್ನು ಪ್ರಶ್ನಿಸಿ ಅವರು ಕೋರ್ಟ್‌ ಮೆಟ್ಟಿಲೇರಿದ್ದಾರೆ.

ಸೇನಾ ನ್ಯಾಯಾಲಯದಲ್ಲಿ ನ್ಯಾಯಾಲಯಕ್ಕೆ ವಕೀಲ/ವಕೀಲೆ ಮತ್ತು ಸಲಹೆಗಾರ/ಸಲಹೆಗಾರ್ತಿ ಹುದ್ದೆಯಲ್ಲಿ ಕಾರ್ಯ ನಿರ್ವಹಿಸಲು ಪರಮಾಧಿಕಾರ ಹೊಂದಿರುವ ಸೇನಾಧಿಕಾರಿಯನ್ನು ಜಡ್ಜ್‌ ಅಡ್ವೋಕೇಟ್‌ ಜನರಲ್(ಜೆಎಜಿ) ಎಂದು ಕರೆಯಲಾಗುತ್ತದೆ.

ಪುರುಷರು ಹಾಗೂ ಮಹಿಳೆಯರಿಗಾಗಿ ಖಾಲಿ ಇರುವ ಹುದ್ದೆಗಳ ಸಂಖ್ಯೆಗೆ ಸಂಬಂಧಿಸಿ ಸಮರ್ಪಕ ಅನುಪಾತವಿಲ್ಲ. ಒಟ್ಟು 6 ಹುದ್ದೆಗಳು ಇದ್ದರೂ, ಮಹಿಳೆಯರಿಗೆ ಮೂರು ಹುದ್ದೆಗಳನ್ನು ಮಾತ್ರ ಮೀಸಲಿಟ್ಟಿರುವುದನ್ನು ಅರ್ಜಿದಾರರು ಪ್ರಶ್ನಿಸಿದ್ದರು.

ವಿಚಾರಣೆ ವೇಳೆ, 'ಈ ತಾರತಮ್ಯ ಪ್ರಶ್ನಿಸಿ ಅರ್ಶನೂರ್ ಕೌರ್‌ ಅವರು ಪ್ರಕರಣ ದಾಖಲಿಸಿರುವುದು ಮೇಲ್ನೋಟಕ್ಕೆ ಸರಿ ಎಂದು ತೋರುತ್ತದೆ' ಎಂದು ಪೀಠ ಅಭಿಪ್ರಾಯಪಟ್ಟಿದೆ.

'ಅರ್ಜಿದಾರರನ್ನು ಜೆಎಜಿ ಹುದ್ದೆಗೆ ನೇಮಕಕ್ಕೆ ಸಂಬಂಧಿಸಿ ಲಭ್ಯವಿರುವ ತರಬೇತಿ ಕೋರ್ಸ್‌ಗೆ ಸೇರ್ಪಡೆ ಮಾಡಬೇಕು' ಎಂದು ಪೀಠವು ಪ್ರತಿವಾದಿಗಳಿಗೆ ನಿರ್ದೇಶನವನ್ನೂ ನೀಡಿದೆ.

'ಮಹಿಳೆಯೊಬ್ಬರನ್ನು ವಾಯುಪಡೆಯಲ್ಲಿ ರಫೇಲ್‌ ಯುದ್ಧವಿಮಾನ ಪೈಲಟ್‌ ಆಗಿ ನೇಮಕ ಮಾಡಿಕೊಳ್ಳಲು ಅವಕಾಶ ಇದೆ ಎಂದಾಗ, ಜೆಎಜಿ ಹುದ್ದೆಯಲ್ಲಿ ಸೇವೆ ಸಲ್ಲಿಸಲು ಮಹಿಳೆಯರಿಗೆ ಅವಕಾಶ ನೀಡುವಲ್ಲಿ ಕಷ್ಟವೇನಿದೆ' ಎಂದು ಕೇಂದ್ರ ಸರ್ಕಾರ ಹಾಗೂ ಸೇನೆ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್ ಐಶ್ವರ್ಯಾ ಭಟ್ಟಿ ಅವರನ್ನು ಉದ್ದೇಶಿಸಿ ಕೇಳಿದೆ.

'ಲಿಂಗತ್ವ ತಟಸ್ಥ ನೀತಿ ಅಂದರೆ, ಒಟ್ಟು ಹುದ್ದೆಗಳಿಗೆ 50:50 ಅನುಪಾತದಲ್ಲಿ ನೇಮಕ ಮಾಡಿಕೊಳ್ಳುವುದು ಎಂದಲ್ಲ. ಆ ಹುದ್ದೆಗೆ ಪುರುಷರು ಅಥವಾ ಮಹಿಳೆಯರ ಪೈಕಿ ಯಾರೂ ನೇಮಕಗೊಳ್ಳಬಹುದು ಎಂದರ್ಥ' ಎಂದೂ ನ್ಯಾಯಮೂರ್ತಿ ಮನಮೋಹನ್‌ ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries