HEALTH TIPS

ಕೋರ್ಟ್​​ನಲ್ಲಿ ಕೇಸ್ ನಡೆಸಲೂ ದುಡ್ಡಿಲ್ಲ: ಬೈಜೂಸ್ ಸಂಸ್ಥಾಪಕರ ಅಳಲು; ದೇಶಕ್ಕಾಗಿ ಮತ್ತೆ ಕಂಪನಿ ಕಟ್ಟುವ ಛಲ

ನವದೆಹಲಿ: ಭಾರತದಲ್ಲಿ ಒಂದು ಕಾಲದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿದ್ದ ಬೈಜೂಸ್ ಇವತ್ತು ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿದೆ. ಸಾಲು ಸಾಲು ವಿವಾದಗಳು, ಸಾಲು ಸಾಲು ಆರೋಪಗಳು, ಸಾಲು ಸಾಲು ಕೋರ್ಟ್ ಕೇಸ್​​ಗಳು ಬೈಜೂಸ್ (Byju’s) ಅನ್ನು ಸಾವಿನ ದವಡೆಗೆ ನೂಕಿವೆ.

ಆದರೂ ಕೂಡ ಅದರ ಸಂಸ್ಥಾಪಕರು ತಾವು ಕಟ್ಟಿದ ಸಂಸ್ಥೆಯ ಜೀವ ಉಳಿಸಲು ಹೆಣಗುತ್ತಿದ್ದಾರೆ. ತಾವು ಪ್ರಾಮಾಣಿಕರಿದ್ದೀವಿ, ಯಾವ ವಂಚನೆಯನ್ನೂ ಮಾಡಿಲ್ಲ ಎಂದು ಬೈಜೂಸ್​​ನ ಸಂಸ್ಥಾಪಕರಾದ ಬೈಜು ರವೀಂದ್ರನ್ ಮತ್ತವರ ಪತ್ನಿ ದಿವ್ಯಾ ಗೋಕುಲನಾಥ್ ಮತ್ತೆ ಮತ್ತೆ ಹೇಳುತ್ತಲೇ ಇದ್ದಾರೆ. ತಾವು ವಂಚಿಸಿ ಹಣ ಸಂಪಾದನೆ ಮಾಡಿಲ್ಲ. ಹಾಗೆ ಹಣ ಇದ್ದಿದ್ದರೆ ಕೋರ್ಟ್ ಕೇಸ್ ನಡೆಸಲು ಹಣಕ್ಕೆ ಹೆಣಗುತ್ತಿರಲಿಲ್ಲ ಎಂದು ದಿವ್ಯಾ ಗೋಕುಲನಾಥ್ ಹೇಳಿದ್ದಾರೆ. ಎಎನ್​​ಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅವರು ತಮ್ಮ ಅಳಲು ತೋಡಿಕೊಂಡಿದ್ದಾರೆ.

'ಇವತ್ತು ಅಮೆರಿಕದಲ್ಲಿ ನನ್ನ ವಿರುದ್ಧ ಕೋರ್ಟ್ ತೀರ್ಪುಗಳು ಬರುತ್ತಲೇ ಇವೆ. ಕೋರ್ಟ್​​​ನಲ್ಲಿ ನಮ್ಮ ಪರ ವಾದಿಸಲು ಯಾರೂ ಇಲ್ಲ. ವಕೀಲರು ಮಿಲಿಯನ್ ಡಾಲರ್ ಕೊಟ್ಟರೆ ಕೋರ್ಟ್​​​ನಲ್ಲಿ ವಾದ ಮಾಡ್ತೀವಿ ಅಂತಾರೆ. ನಮಗೆ ಎಲ್ಲಿಂದ ಬರುತ್ತೆ ಮಿಲಿಯನ್ ಡಾಲರ್? ನಮ್ಮ ಬಳಿ 533 ಮಿಲಿಯನ್ ಡಾಲರ್ ಇದ್ದಿದ್ದರೆ ಈ ಪರಿಸ್ಥಿತಿ ಇರುತ್ತಿತ್ತಾ? ಕೋರ್ಟ್​​​ನಲ್ಲಿ ಹೋರಾಡುತ್ತಿದ್ದೆವು. ವಕೀಲರಿಗೆ ಹಣ ಬಿಸಾಡುತ್ತಿದ್ದೆವು' ಎಂದು ದಿವ್ಯಾ ಗೋಕುಲನಾಥ್ ಹತಾಶೆ ತೋಡಿಕೊಂಡಿದ್ದಾರೆ.

ಯಾವುದಿದು 533 ಮಿಲಿಯನ್ ಡಾಲರ್?

ಬೈಜೂಸ್ ಸಂಸ್ಥೆಯ ಮೇಲೆ ಕೆಲವು ಗುರುತರವಾದ ಹಣಕಾಸು ಅಕ್ರಮ ಆರೋಪಗಳಿವೆ. ಅಮೆರಿಕದಲ್ಲಿರುವ ಬೈಜೂಸ್ ಆಲ್ಫಾ ಸಂಸ್ಥೆಗೆ 533 ಮಿಲಿಯನ್ ಡಾಲರ್ ಹಣವನ್ನು ಅಕ್ರಮವಾಗಿ ರವಾನೆ ಮಾಡಿದ ಗಂಭೀರ ಆರೋಪ ಇದೆ. ಇದರಲ್ಲಿ ಬೈಜು ರವೀಂದ್ರನ್, ಅವರ ಪತ್ನಿ ದಿವ್ಯಾ ಗೋಕುಲನಾಥ್ ಮತ್ತು ಮಾಜಿ ಸಿಇಒ ಅನಿತಾ ಕಿಶೋರ್ ಅವರು ಆರೋಪಿಗಳು. ಇಲ್ಲಿ ಯಾವುದೇ ಅಕ್ರಮ ಮಾಡಲಾಗಿಲ್ಲ ಎಂಬುದು ಇವರೆಲ್ಲರ ವಾದ.

ಇಲ್ಲಿ ಬೈಜೂಸ್​​ಗೆ ಬಂಡವಾಳ ನೀಡಿದ ಹೂಡಿಕೆದಾರರೇ ಕೋರ್ಟ್​​​ನಲ್ಲಿ ಕೇಸ್ ಹಾಕಿರುವುದು. ಸಂಸ್ಥಾಪಕ ಬೈಜು ರವೀಂದ್ರನ್ ಅವರು ಕೆಲ ಹೂಡಿಕೆದಾರರನ್ನು ದೂಷಿಸಿದ್ದಾರೆ. 'ನಮ್ಮ ಹೂಡಿಕೆದಾರರೆಲ್ಲರನ್ನೂ ನಾನು ದೂಷಿಸುತ್ತಿಲ್ಲ. ಕೊಳೆತಿರುವ ಕೆಲ ಹಣ್ಣುಗಳಿವೆ. ಇವರು ಬೈಜುಸ್​​ನಿಂದ ನೀವ್ಯಾರೂ ಅಂದಾಜಿಸಲು ಸಾಧ್ಯವಿಲ್ಲದಷ್ಟು ಹಣ ಮಾಡಿದ್ದಾರೆ' ಎಂದು ರವೀಂದ್ರನ್ ಪ್ರತ್ಯಾರೋಪ ಮಾಡಿದ್ದಾರೆ. ಇವರು ಅಮೆರಿಕ ಎರಡು ಹೂಡಿಕೆ ಸಂಸ್ಥೆಗಳ ಮೇಲೆ ಬೊಟ್ಟು ತೋರಿಸಿದ್ದಾರೆ.

ಹಣ ಇವತ್ತು ಹೋಗುತ್ತೆ, ನಾಳೆ ಬರುತ್ತೆ…

'ನಾನು ಹಣದ ಬಗ್ಗೆ ಯೋಚಿಸುತ್ತಿಲ್ಲ. ಲಕ್ಷ್ಮೀ ಇವತ್ತು ಬರುತ್ತಾಳೆ, ನಾಳೆ ಹೋಗುತ್ತಾಳೆ. ಸರಸ್ವತಿ ನಮ್ಮೊಂದಿಗೆ ಇದ್ದಾಳೆ. ನಮ್ಮನ್ನು ಹೀನಾಯವಾಗಿ ನಡೆಸಿಕೊಂಡಿದ್ದು ಮಾತ್ರ ಬಹಳ ಅನ್ಯಾಯ ಎನಿಸುತ್ತದೆ' ಎಂದು ಹೇಳುವ ದಿವ್ಯಾ ಗೋಕುಲನಾಥ್, ದೇಶಕ್ಕಾಗಿ ಎಲ್ಲವನ್ನೂ ಸಹಿಸಿಕೊಂಡು ಹೋಗುತ್ತಿರುವುದಾಗಿ ಹೇಳಿದ್ದಾರೆ.

'ಕಳೆದ 20 ವರ್ಷಗಳಿಂದ ಕಟ್ಟಿರುವುದನ್ನು ಉಳಿಸಿಕೊಳ್ಳಲು ನಾವ್ಯಾಕೆ ಹೋರಾಡಬಾರದು? ನಾವು ತಿರುಗಿ ನಿಂತಾಗ ಹಿಂದೆ ಇದ್ದ ಗುರಿಯೇ ಇರುತ್ತದೆ. ಆದರೆ, ನಮ್ಮ ಕಾರ್ಯನಿರ್ವಹಣೆ ಇನ್ನಷ್ಟು ದಕ್ಷವಾಗಿರುತ್ತದೆ. ಇಲ್ಲಿಯವರೆಗೆ ನಾವು ಸಾಕಷ್ಟು ಪಾಠ ಕಲಿತಿದ್ದೇವೆ' ಎಂದು ಬೈಜು ರವೀಂದ್ರನ್ ಹೇಳಿದ್ಧಾರೆ.

ಬೈಜುವನ್ನು ಹೊಸ ಉತ್ಸಾಹದಲ್ಲಿ ಮರಳಿ ಕಟ್ಟಿ ನಿಲ್ಲಿಸಲು ಸಂಸ್ಥಾಪಕರು ಪಣತೊಟ್ಟಂತಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries