ನವದೆಹಲಿ: ಕರ್ನಲ್ ಸೋಫಿಯಾ ಖುರೇಷಿ ಹಾಗೂ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಅವರ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ್ದ ಆರೋಪದಡಿ ಬಂಧಿತರಾಗಿರುವ ಪ್ರೊಫೆಸರ್ ಅಲಿ ಖಾನ್ ಮೊಹಮ್ಮದ್ ಅವರ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಳ್ಳಲು ಸುಪ್ರೀಂಕೋರ್ಟ್ ಸೋಮವಾರ ತೀರ್ಮಾನಿಸಿದೆ. ಈ ಸಂಬಂಧ ಸುದ್ದಿಸಂಸ್ಥೆ ಎಎನ್‌ಐ ವರದಿ ಮಾಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ತ್ವರಿತವಾಗಿ ವಿಚಾರಣೆ ನಡೆಸುವಂತೆ ಕೋರಿ ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ನೇತೃತ್ವದ ಪೀಠದ ಎದುರು ವಿಷಯವನ್ನು ಪ್ರಸ್ತಾಪಿಸಿದರು.
ಈ ಪ್ರಕರಣದ ವಿಚಾರಣೆಯನ್ನು ಮೇ 20 ಅಥವಾ 21ರಂದು ನಡೆಸಲಾಗುವುದು ಎಂದು ಸುಪ್ರೀಂಕೋರ್ಟ್ ತಿಳಿಸಿದೆ.
'ಕರ್ನಲ್ ಸೋಫಿಯಾ ಅವರನ್ನು ಶ್ಲಾಘಿಸುವ ಬಲಪಂಥೀಯ ಜನರು, ಗುಂಪು ಹಲ್ಲೆಗಳು ಹಾಗೂ ಬುಲ್ಡೋಜರ್ ಕ್ರಮದ ಸಂತ್ರಸ್ತರಿಗೆ ರಕ್ಷಣೆ ನೀಡುವಂತೆಯೂ ಒತ್ತಾಯಿಸಬೇಕು' ಎಂದು ಸಾಮಾಜಿಕ ಮಾಧ್ಯಮದಲ್ಲಿ ಮೇ 7ರಂದು ಖಾನ್ ಪೋಸ್ಟ್ ಮಾಡಿದ್ದರು.
'ಇಬ್ಬರೂ ಅಧಿಕಾರಿಗಳು 'ಆಪರೇಷನ್ ಸಿಂಧೂರ' ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವುದು ವಾಸ್ತವದಲ್ಲಿಯೂ ಸಾಧ್ಯವಾಗಬೇಕು. ಇಲ್ಲದಿದ್ದರೆ ಅದು ಕೇವಲ ಬೂಟಾಟಿಕೆಯಾಗುತ್ತದೆ' ಎಂದೂ ಖಾನ್ ಹೇಳಿದ್ದರು.
ಅಲಿ ಖಾನ್ ಅವರ ಹೇಳಿಕೆಯನ್ನು ಖಂಡಿಸಿ ಹರಿಯಾಣ ರಾಜ್ಯ ಮಹಿಳಾ ಆಯೋಗವು ಮೇ 12ರಂದು ಅವರಿಗೆ ನೋಟಿಸ್ ನೀಡಿತ್ತು. ಮಹಿಳಾ ಅಧಿಕಾರಿಗಳು, ದೇಶದ ಸಶಸ್ತ್ರ ಪಡೆಗಳ ವಿರುದ್ಧ ಈ ರೀತಿಯ ಹೇಳಿಕೆ ನೀಡುವುದು ಕಳವಳಕಾರಿಯಾಗಿದೆ ಎಂದು ಹೇಳಿತ್ತು.
ಇದಕ್ಕೆ ಪ್ರತಿಕ್ರಿಯಿಸಿದ್ದ ಖಾನ್ 'ಮಹಿಳಾ ಆಯೋಗವು ತನ್ನ ಅಧಿಕಾರ ವ್ಯಾಪ್ತಿಯನ್ನು ಮೀರಿ, ನನ್ನ ಹೇಳಿಕೆಯನ್ನು ತಪ್ಪಾಗಿ ಓದಿ, ಅರ್ಥೈಸಿಕೊಂಡಿದೆ. ನನ್ನ ಹೇಳಿಕೆಯನ್ನು ಅದು ಸಂಪೂರ್ಣವಾಗಿ ತಲೆಕೆಳಗಾಗಿಸಿದೆ' ಎಂದು ಹೇಳಿದ್ದರು




