ಮಂಗಳೂರು: ದ್ವಿತೀಯ ಪಿ.ಯು. ಗಣಿತ -2 ಪರೀಕ್ಷೆ ಹಾಗೂ ರಾಜೀವ ಗಾಂಧಿ ಆರೋಗ್ಯ ಬಿ ಫಾರ್ಮಾ ಸೆಮಿಸ್ಟರ್ ಪರೀಕ್ಷೆ ಶುಕ್ರವಾರ ನಿಗದಿಯಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿಢೀರ್ ಬಂದ್ ನಿಂದಾಗಿ ವಿದ್ಯಾರ್ಥಿಗಳು ಪಡಿಪಾಟಲು ಅನುಭವಿಸಿದರು.
'ನನ್ನ ಮಗಳಿಗೆ ಬಿ-ಫಾರ್ಮದ ಏಳನೇ ಸೆಮಿಸ್ಟರ್ ಪರೀಕ್ಷೆ ಶುಕ್ರವಾರ ಇದೆ.
ಮಂಗಳೂರಿನಲ್ಲಿ ಪರೀಕ್ಷಾ ಕೇಂದ್ರವಿದ್ದು, ಪುತ್ತೂರಿನಿಂದ ಅಲ್ಲಿಗೆ ತೆರಳಬೇಕಿದೆ. ಬಸ್ ಸಂಚಾರ ಸ್ಥಗಿತಗೊಂಡಿದೆ. ಟ್ಯಾಕ್ಸಿ ಚಾಲಕರೂ ಮಂಗಳೂರಿಗೆ ತೆರಳಲು ಒಪ್ಪುತ್ತಿಲ್ಲ. ಏನು ಮಾಡಬೇಕು ಎಂದು ತೋಚುತ್ತಿಲ್ಲ ಎಂದು ವಿದ್ಯಾರ್ಥಿನಿಯೊಬ್ಬರ ಪೋಷಕರು ಅಳಲು ತೋಡಿಕೊಂಡರು.
ದ್ವಿತೀಯ ಪಿ.ಯು. ಗಣಿತ 2 ಪರೀಕ್ಷಯ ಪ್ರಶ್ನೆ ಪತ್ರಿಕೆಗಳನ್ನು ಪರೀಕ್ಷೆ ಕೇಂದ್ರಗಳಿಗೆ ಈಗಾಗಲೇ ರವಾನೆ ಮಾಡಲಾಗಿದೆ. ಜಿಲ್ಲಾಡಳಿತವು ಪರೀಕ್ಷೆಯನ್ನು ಮುಂದೂಡಿಲ್ಲ. ಜಿಲ್ಲೆಯಲ್ಲಿ ಪ್ರಕ್ಷುಬ್ದ ಸ್ಥಿತಿ ನಿರ್ಮಾಣವಾಗಿದೆ ಎಂದು ಜಿಲ್ಲಾಡಳಿತವೇ ನಿಷೇಧಾಜ್ಞೆ ಜಾರಿಗೊಳಿಸಿದೆ. ಬಸ್ ಸಂಚಾರ ಸ್ಥಗಿತಗೊಂಡಿದೆ. ಅಹಿತಕರ ಘಟನೆಗಳಿಗೆ ಸಂಬಂಧಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ವದಂತಿಗಳು ಹರಿದಾಡುತ್ತಿವೆ. ಪರೀಕ್ಷಾ ಕೇಂದ್ರಕ್ಕೆ ಹೋಗುವುದಾದರೂ ಹೇಗೆ ಎಂದು ಪೋಷಕರೊಬ್ಬರು ಅಳಲು ತೋಡಿಕೊಂಡರು.
ಪರೀಕ್ಷೆ ಬರೆಯಲು ವಿದ್ಯಾರ್ಥಿನಿಯೊಬ್ಬರು ಮೊಡಂಕಾಪು ದ್ವಿತೀಯ ಪಿ.ಯು. ಪರೀಕ್ಷಾ ಕೇಂದ್ರಕ್ಕೆ ತೆರಳಲು ಸಮಸ್ಯೆ ಅನುಭವಿಸಿದರು.
ನಗರದ ಹಂಪನಕಟ್ಟೆಯಲ್ಲಿ ಮತ್ತೊಂದು ಖಾಸಗಿ ಬಸ್ ಗೆ ಕಲ್ಲು ತೂರಾಟ ನಡೆದಿದೆ.




