ಬೇಸಿಗೆಯ ಉರಿ ಬಿಸಿಲಿನಲ್ಲಿ ಹಗಲು ಮತ್ತು ರಾತ್ರಿ ಎರಡನ್ನೂ ಕಳೆಯವುದು ಬಹಳ ಕಷ್ಟ. ಹಗಲು ಸೂರ್ಯನ ಕಿರಣಗಳು ವಿಪರೀತ ಬಿಸಿಗೆ ಕಾರಣವಾಗುತ್ತವೆ. ಹಾಗೆ ರಾತ್ರಿಯ ಸಮಯದಲ್ಲಿ ಬಿಸಿ ಗಾಳಿಯು ನಿದ್ರೆ ಇಲ್ಲದಂತೆ ಮಾಡುತ್ತದೆ. ಈಗ ಫ್ಯಾನ್, ಕೂಲರ್, ಎಸಿ ಇಲ್ಲದಿದ್ದರೆ ರಾತ್ರಿ ನಿದ್ರೆ ಬಾರದ ಸ್ಥಿತಿಗೆ ನಾವು ತಲುಪಿದ್ದೇವೆ. ರಾತ್ರಿ ನಿದ್ರೆ ಬರಬೇಕಾದರೆ ಇದರಲ್ಲಿ ಯಾವುದಾದರು ಒಂದು ವಸ್ತುವಾದರು ನಮ್ಮ ಮನೆಯಲ್ಲಿ ಇರಲೇಬೇಕು ಎಂಬಂತಾಗಿದೆ.
ಅದರಲ್ಲೂ ಈಗ ಹಳ್ಳಿ ಹಳ್ಳಿಗೂ ಎಸಿ ತಲುಪಿದೆ. ಮೊದಲೆಲ್ಲ ಫ್ಯಾನ್ ಹಾಗೂ ಕೂಲರ್ ಜನರನ್ನ ತಂಪಾಗಿಡುತ್ತಿದ್ದವು. ಆದ್ರೆ ಈಗ ಫ್ಯಾನ್ ಹಾಗೂ ಕೂಲರ್‌ಗಳಿಂದ ಈ ಹೀಟ್ ಅನ್ನು ತಡೆಯಲಾಗುತ್ತಿಲ್ಲ. ಎಷ್ಟೇ ವೇಗವಾಗಿ ನೀವು ಫ್ಯಾನ್ ಇಟ್ಟರೂ ಅದರಿಂದ ತಂಪನೆಯ ವಾತಾವರಣ ಸೃಷ್ಟಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ನಿದ್ರೆಯೂ ಸರಿಯಾಗಿ ಮಾಡಲು ಆಗುತ್ತಿಲ್ಲ.
ಇದೇ ಕಾರಣಕ್ಕೆ ಈಗ ಎಲ್ಲರು ಎಸಿಯ ಮೊರೆಹೋಗಿದ್ದಾರೆ. ಎಸಿ ತಂಪನೆಯ ವಾತಾವರಣ ಸೃಷ್ಟಿಸುವುದು ಖಚಿತ. ಹೀಗಾಗಿ ಎಲ್ಲರು ಒಂದು ಎಸಿ ಹಾಕಿಸಿಕೊಂಡು ಬೇಸಿಗೆಯ ಉರಿಯಿಂದ ಪಾರಾಗಲು ಮುಂದಾಗುತ್ತಾರೆ. ಆದ್ರೆ ಎಸಿಯಲ್ಲಿ ಇಡೀ ರಾತ್ರಿ ಮಲಗುವುದು ಎಷ್ಟು ಉತ್ತಮ. ಎಸಿಯಿಂದ ನಿಮ್ಮ ದೇಹದ ಮೇಲಾಗುವ ಪರಿಣಾಮ ಏನು ಗೊತ್ತಾ?
ಎಸಿ ಬಳಸಿದರೆ ಮಾತ್ರ ನಿದ್ರೆ ಬರುತ್ತದೆ ಎಂಬ ಒಂದು ಸಮೂಹ ಇದೆ. ಆದ್ರೆ ಎಸಿಯಲ್ಲಿ ಇಡೀ ರಾತ್ರಿ ಕಳೆಯುವುದು ಎಷ್ಟು ದೊಡ್ಡ ಹಾನಿಗೆ ಕಾರಣವಾಗುತ್ತಿದೆ ಎಂಬುದು ನಿಮಗೆ ಗೊತ್ತಿದ್ಯಾ? ಹೌದು ಎಸಿಯಲ್ಲಿ ಮಲಗುವುದು ಹಲವು ರೀತಿಯ ಅನಾರೋಗ್ಯ ಸಮಸ್ಯೆಗಳ ತಂದೊಡ್ಡಲಿದೆ. ಹಾಗಾದ್ರೆ ದೇಹಕ್ಕಾಗುವ ಹಾನಿ ಕುರಿತು ನಾವಿಂದು ತಿಳಿದುಕೊಳ್ಳೋಣ.
ನಿದ್ರೆಯ ಗುಣಮಟ್ಟದ ಮೇಲೆ ಪರಿಣಾಮ
ನೀವು ತಾಪಮಾನವನ್ನು ಕಡಿಮೆ ಇಟ್ಟು ಮಲಗುವುದರಿಂದ ನಿಮ್ಮ ನಿದ್ರೆಯ ಗುಣ ಮಟ್ಟದ ಮೇಲೆ ಇದು ಪರಿಣಾಮ ಬೀರಬಹುದು. ಆರಂಭದಲ್ಲಿ ಚೆನ್ನಾಗಿ ನಿದ್ರೆ ಬಂದರೂ ಕೂಡ ಕೊಠಡಿಯ ತಾಪಮಾನ ಇಳಿಕೆಯಾದಾಗ ನಿಮಗೆ ಎಚ್ಚರವಾಗಬಹುದು. ಇದು ನಿದ್ರೆಗೆ ಭಂಗ ತರುವ ಸಾಧ್ಯತೆ ಹೆಚ್ಚಾಗಿರುತ್ತೆ. ಹಾಗೆ ಎಸಿಯು ರೂಮಿನಲ್ಲಿರುವ ಧೂಳು, ಅಲರ್ಜಿಗೆ ಕಾರಣವಾಗುತ್ತದೆ. ಇದು ನಿಮ್ಮ ದೇಹ ಸೇರುವುದು ಹಾಗೆ ಅದರಿಂದ ಸಮಸ್ಯೆಗಳ ಎದುರಿಸಬೇಕಾಗುತ್ತದೆ. ಎಸಿ ಇಲ್ಲದ ನಿದ್ರೆಯು ನಿಮಗೆ ಉತ್ತಮ ಉತ್ತೇಜಿಸಲಿದೆ. ಹಾಗೆ ಅಲರ್ಜಿಯ ಅಪಾಯ ಕಡಿಮೆ ಮಾಡಲಿದೆ.
ಮೈಕೈ ನೋವು
ಎಸಿಯಲ್ಲಿ ಸತತ 5ರಿಂದ 6 ಗಂಟೆ ಕಳೆಯುವುದು ದೇಹದ ನೋವಿಗೆ ಕಾರಣವಾಗುತ್ತದೆ. ಸ್ನಾಯುಗಳ ಒತ್ತಡ ಮತ್ತು ಬಿಗಿತಕ್ಕೆ ಕಾರಣವಾಗಬಹುದು, ಅಸ್ತಿತ್ವದಲ್ಲಿರುವ ಕೀಲು ಅಥವಾ ಸ್ನಾಯು ನೋವನ್ನು ಉಲ್ಬಣಗೊಳಿಸುತ್ತದೆ. ಅಂತಹ ಪರಿಸ್ಥಿತಿ ಇರುವವರು, ರಾತ್ರಿಯಲ್ಲಿ AC ಆಫ್ ಮಾಡುವುದು ಅಥವಾ ಫ್ಯಾನ್ ಆಯ್ಕೆ ಮಾಡುವುದು ಈ ಸಮಸ್ಯೆಯಿಂದ ಹೊರಬರಲು ಒಂದು ಮಾರ್ಗವಾಗಿದೆ.
ಎಸಿಗೆ ಹೊಂದಿಕೊಳ್ಳುವ ದೇಹ
ನಿಮ್ಮ ದೇಹದ ಉಷ್ಣಾಂಶವು ಹೊರಗಿನ ಉಷ್ಣಾಂಶಕ್ಕೆ ಹೊಂದಿಕೊಂಡಿರುತ್ತದೆ. ಹಗಲಿನಲ್ಲಿ ನೀವು ಬಿಸಿಲಿಗೆ ಹೋದಾಗ ದೇಹ ತಂಪಾಗಲು ಯತ್ನಿಸುತ್ತದೆ. ಹಾಗೆ ರಾತ್ರಿಯ ಸಮಯದಲ್ಲೂ ಸಹ ಇದು ಮುಂದುವರೆಯುತ್ತದೆ. ಆದ್ರೆ ನೀವು ರಾತ್ರಿ ಸಮಯದಲ್ಲಿ ಎಸಿಗೆ ಒಳಗಾಗುವುದು ದೇಹದ ಮೇಲೆ ಪರಿಣಾಮ ಬೀರುತ್ತದೆ. ದೇಹವು ಸ್ವತಂತ್ರವಾಗಿ ತನ್ನ ಉಷ್ಣಾಂಶ ನಿಯಂತ್ರಿಸುವಲ್ಲಿ ಯಡುವುತ್ತದೆ. ಹಾಗೆ ಮುಂದೆ ಎಸಿ ಇರದೆ ನೀವು ರಾತ್ರಿ ಕಳೆಯುವುದು ಕಷ್ಟವಾಗುತ್ತದೆ. ಏಕೆಂದರೆ ದೇಹ ರಾತ್ರಿಯ ತಂಪನೆಯ ವಾತಾವರಣಕ್ಕೆ ಹೊಂದಿಕೊಂಡಿರುತ್ತದೆ.
ಎಸಿಯಿಂದ ಇಂತಹ ಕೆಲವು ಅಡ್ಡಪರಿಣಾಮವನ್ನು ನಾವು ನೋಡಬಹುದು. ಆದ್ರೆ ಅತೀಯಾದ ಬಿಸಿ ಕೂಡ ನಿದ್ರೆಯನ್ನು ಹಾಳು ಮಾಡುತ್ತದೆ, ಹೀಗಾಗಿ ಮಲಗುವ ಒಂದು ಗಂಟೆ ಮೊದಲು ಎಸಿ ಆನ್ ಮಾಡುವುದು ಹಾಗೆ ಮಧ್ಯರಾತ್ರಿಯಲ್ಲಿ ತಾನಾಗಿಯೇ ಎಸಿ ಆಫ್ ಆಗುವಂತಹ ವೈಶಿಷ್ಟ್ಯ ಇದ್ದರೆ ಒಳಿತು.






