ಢಾಕಾ: ಭಾರತದ ಆಂತರಿಕ ವಿಚಾರದಲ್ಲಿ ಮೂಗುತೂರಿಸುವ ಖಯಾಲಿಯನ್ನು ಬಾಂಗ್ಲಾದೇಶ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮೊಹಮದ್ ಯೂನುಸ್ ಮುಂದುವರಿಸಿದ್ದು, ಬಾಂಗ್ಲಾ ಪ್ರವಾಸದಲ್ಲಿರುವ ನೇಪಾಳ ಸಂಸತ್ತಿನ ಉಪ ಸ್ಪೀಕರ್‌ರೊಂದಿನ ಸಭೆಯಲ್ಲಿ, “ಬಾಂಗ್ಲಾದೇಶ, ನೇಪಾಳ, ಭೂತಾನ್ ಹಾಗೂ ಈಶಾನ್ಯ ಭಾರತದ 7 ರಾಜ್ಯಗಳನ್ನು ಒಳಗೊಂಡು ಸಮಗ್ರ ಆರ್ಥಿಕ ಯೋಜನೆಯ ಅಗತ್ಯವಿದೆ’ ಎಂದು ಹೇಳಿದ್ದಾರೆ.
ಬಾಂಗ್ಲಾ ನೇಪಾಳ ನಡುವಿನ ಜಲ ವಿದ್ಯುತ್ ಯೋಜನೆಗೆ ಸೀಮಿತವಾಗಬೇಕಿದ್ದ ಚರ್ಚೆಯನ್ನು ಪ್ರಾದೇಶಿಕ ಸಂಬಂಧಗಳ ಅಗತ್ಯತೆಯನ್ನು ಪ್ರಸ್ತಾಪಿಸುತ್ತಲೇ ಈಶಾನ್ಯ ಭಾರತದೆಡೆಗೆ ತಿರುಗಿಸುವ ಯತ್ನವನ್ನು ಯೂನುಸ್ ಮಾಡಿದ್ದಾರೆ. ಇದು ವಿವಾದಕ್ಕೆ ಕಾರಣವಾಗಿದೆ.
ಇತ್ತೀಚಿನ ಚೀನಾ ಭೇಟಿ ವೇಳೆ ಬಾಂಗ್ಲಾ ಆರ್ಥಿಕತೆಗೆ ಚೀನಾ ನೆರವು ಕೋರುತ್ತಲೇ, “ಈಶಾನ್ಯ ಭಾರತಕ್ಕೆ ಸಮುದ್ರದ ಸಂಪರ್ಕವಿಲ್ಲ. ಸಮುದ್ರದ ನಿಜವಾದ ಕಾವಲುಗಾರರು ನಾವೇ’ ಎಂದು ಈಶಾನ್ಯ ಭಾರತದ ಬಗ್ಗೆ ಯೂನುಸ್ ಪ್ರಸ್ತಾಪಿಸಿದ್ದರು. ಆದರೆ ಈ ವೇಳೆ ಈಶಾನ್ಯ ಭಾರತವನ್ನು ಚೀನಾದೊಂದಿನ ಚರ್ಚೆಯ ವೇಳೆ ಪ್ರಸ್ತಾಪಿಸಿದ ಔಚಿತ್ಯವೇನು ಎಂದು ಪ್ರಧಾನಮಂತ್ರಿಗಳ ಆರ್ಥಿಕ ಸಲಹಾ ಮಂಡಳಿ ಸದಸ್ಯರಾದ ಆರ್ಥಿಕ ತಜ್ಞ ಸಂಜೀವ್ ಸನ್ಯಾಲ್ ಪ್ರಶ್ನಿಸಿದ್ದರು.




