ವಾಷಿಂಗ್ಟನ್: ಹಲವು ತಿಂಗಳ ಸತತ ಮಾತುಕತೆ ಬಳಿಕ ಅಮೆರಿಕ ಹಾಗೂ ಉಕ್ರೇನ್ ನಡುವಣ ಖನಿಜ ಒಪ್ಪಂದಕ್ಕೆ ಸಹಿ ಬಿದ್ದಿದೆ. ಇದು ಉಕ್ರೇನ್‌ನ ಇಂಧನ ಹಾಗೂ ಖನಿಜ ಸಂಪನ್ಮೂಲ ಬಳಕೆಗೆ ಅಮೆರಿಕಕ್ಕೆ ಅವಕಾಶ ಮಾಡಿಕೊಡಲಿದೆ.
ರಷ್ಯಾದೊಂದಿಗಿನ ಯುದ್ಧದಿಂದ ಉಕ್ರೇನ್‌ನ ಆರ್ಥಿಕ ಚೇತರಿಕೆಗೆ ಉತ್ತೇಜನ ನೀಡಲು ಪುನರ್ ನಿರ್ಮಾಣ ಹೂಡಿಕೆ ನಿಧಿಯನ್ನು ಸ್ಥಾಪಿಸಲು ಎರಡೂ ದೇಶಗಳು ಒಪ್ಪಿಕೊಂಡಿವೆ.
ಉಭಯ ರಾಷ್ಟ್ರಗಳ ನಡುವೆ ಒಪ್ಪಂದವಾಗಿರುವುದರ ಬಗ್ಗೆ ಬುಧವಾರ ಟ್ರಂಪ್ ಆಡಳಿತ ಮಾಹಿತಿ ನೀಡಿದೆ.
ಉಕ್ರೇನ್‌ನ ಶಾಂತಿ ಹಾಗೂ ಅಭಿವೃದ್ಧಿಗೆ ಉಭಯ ರಾಷ್ಟಗಳು ಬದ್ಧವಾಗಿದೆ ಎನ್ನುವುದರ ಪ್ರತೀಕ ಇದು ಎಂದು ಅಮೆರಿಕದ ಹಣಕಾಸು ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಹೇಳಿದ್ದಾರೆ. ಅಮೆರಿಕದಿಂದ ಸೇನಾ ನೆರವು ಸಿಗುವ ನಿಟ್ಟಿನಲ್ಲಿ ಉಕ್ರೇನ್‌ಗೆ ಈ ಒಪ್ಪಂದ ಮಹತ್ವದಾಗಿದೆ.
ಉಕ್ರೇನ್‌ನಲ್ಲಿ ಭಾರಿ ಪ್ರಮಾಣದ ಗ್ರಾಫೈಟ್, ಟೈಟಾನಿಯಂ ಹಾಗೂ ಲೀಥಿಯಂ ನಿಕ್ಷೇಪ ಇದೆ ಎನ್ನಲಾಗಿದೆ. ನವೀಕರಿಸಬಹುದಾದ ಇಂಧನ, ಸೇನಾ ಹಾಗೂ ಕೈಗಾರಿಕಾ ಮೂಲಸೌಕರ್ಯ ನಿರ್ಮಾಣದಲ್ಲಿ ಇವುಗಳಿಗೆ ಭಾರಿ ಬೇಡಿಕೆ ಇದೆ.
ಈ ಒಪ್ಪಂದದಿಂದ ಉಕ್ರೇನ್ ಅಭಿವೃದ್ಧಿ ಅರಂಭವಾಗಿದೆ. ರಷ್ಯಾವನ್ನು ಬೆಂಬಲಿಸಿದ ಹಾಗೂ ಯುದ್ಧ ಸಾಮಾಗ್ರಿಯನ್ನು ಪೂರೈಸಿದ ಯಾವ ದೇಶದಕ್ಕೂ ಉಕ್ರೇನ್ ಮರುನಿರ್ಮಾಣ ಯೋಜನೆಯ ಲಾಭ ಪಡೆಯಲು ಬಿಡುವುದಿಲ್ಲ ಎಂದು ಬೆಸೆಂಟ್ ವಿಡಿಯೊ ಸಂದೇಶದಲ್ಲಿ ಹೇಳಿದ್ದಾರೆ.
ಒಪ್ಪಂದ ವಿವರಗಳನ್ನು ತಕ್ಷಣಕ್ಕೆ ಟ್ರಂಪ್ ಆಡಳಿತ ನೀಡಿಲ್ಲ.




