ಮಂಜೇಶ್ವರ: ಉದ್ಯಾವರ ಶ್ರೀ ಅರಸು ಮಂಜೀಷ್ಣಾರ್ ದೈವಗಳ ಕ್ಷೇತ್ರದಲ್ಲಿ ಸುಮಾರು 11 ಲಕ್ಷ ರೂ. ಮೊತ್ತದಲ್ಲಿ ನೂತನವಾಗಿ ನಿರ್ಮಿಸಿದ ಪ್ರಧಾನ ಮಹಾದ್ವಾರದ ಉದ್ಘಾಟನೆ ಹಾಗೂ ಕಾಣಿಕೆ ಡಬ್ಬಿ ಮತ್ತು ನೂತನ ಕಚೇರಿಯ ಉದ್ಘಾಟನಾ ಕಾರ್ಯಕ್ರಮ ಬುಧವಾರ ಬೆಳಗ್ಗೆ ನಡೆಯಿತು. ತಂತ್ರಿ ಬಡಾಜೆ ಬೂಡು ಬ್ರಹ್ಮಶ್ರೀ ಗೋಪಾಲಕೃಷ್ಣ ತಂತ್ರಿ ದೀಪ ಬೆಳಗಿಸಿದರು. ಕೇರಳ ಮಲಬಾರ್ ದೇವಸ್ವಂ ಮಂಡಳಿಯ ಆಯುಕ್ತ ಟಿ.ಸಿ. ಬಿಜು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು. ಈ ವೇಳೆ ಕ್ಷೇತ್ರದ ಅರ್ಚಕರು, ಆಚಾರಪಟ್ಟವರು, ಗುರಿಕಾರರು ಮತ್ತು ಹತ್ತು ಸಮಸ್ತರು ಉಪಸ್ಥಿತರಿದ್ದರು. ಬಳಿಕ ನಡೆದ ಸರಳ ಸಮಾರಂಭದಲ್ಲಿ ಕ್ಷೇತ್ರದ
ಆಡಳಿತ ಮೊಕ್ತೇಸರ ಕಿರಣ್ ಕುಮಾರ್ ಶೆಟ್ಟಿ ಮಾಡ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕಾಸರಗೋಡು ವಿಭಾಗ ಮಲಬಾರ್ ದೇವಸ್ವಂ ಮಂಡಳಿಯ ಸಹಾಯಕ ಆಯುಕ್ತ ಕೆ.ಪಿ. ಪ್ರದೀಪ್ ಕುಮಾರ್, ಮಹಾದ್ವಾರದ ದಾನಿಗಳಾದ ಕೇಶವ ಶಂಕರ ಆಳ್ವ ಕೊಳಕೆಗುತ್ತು, ಮೋಹಿತ್ ಕೇಶವ್ ಆಳ್ವ, ವಿಠ್ಠಲ್ ಆಳ್ವ, ಸಂಕಪ್ಪ ಆಳ್ವ, ಆಡಳಿತ ಮಂಡಳಿ ಸದಸ್ಯರಾದ ಯೋಗೀಶ್ ಕುಂಜತ್ತೂರು, ಸದಾಶಿವ ಶೆಟ್ಟಿ, ಕರುಣಾಕರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದು, ಶುಭಾಶಂಸನೆಗೈದರು. ಈ ವೇಳೆ ಮಹಾದ್ವಾರದ ಸೇವಾಕರ್ತೃ, ದ್ವಾರ ನಿರ್ಮಾಣದಲ್ಲಿ ತೊಡಗಿಸಿದವರನ್ನ, ವಿವಿಧ ಕಾರ್ಯಗಳಲ್ಲಿ ಸೇವೆ ಸಲ್ಲಿಸಿದ ಮಹನೀಯರನ್ನು ವೇದಿಕೆಯಲ್ಲಿ ಗೌರವಿಸಲಾಯಿತು. ಕ್ಷೇತ್ರ ಕಾರ್ಯನಿರ್ವಹಣಾ ಅಧಿಕಾರಿ ಕೆ.ಪಿ. ಸುನಿಲ್ ಕುಮಾರ್ ಸ್ವಾಗತಿಸಿ, ಉತ್ಸವ ಸಮಿತಿ ಅಧ್ಯಕ್ಷ ಹರೀಶ್ ಶೆಟ್ಟಿ ಮಾಡ ನಿರೂಪಿಸಿದರು. ಆಡಳಿತ ಮಂಡಳಿ ಸದಸ್ಯ ದಯಾಕರ ಮಾಡ ವಂದಿಸಿದರು.
ಉದ್ಯಾವರ ಮಾಡ ಶ್ರೀ ಅರಸು ಮಂಜೀಷ್ಣಾರ್ ದೈವಗಳ ಕ್ಷೇತ್ರದ ವಾರ್ಷಿಕ ಉತ್ಸವ ಹಾಗೂ ಐತಿಹಾಸಿಕ ಬಂಡಿ ಮಹೋತ್ಸವ ಇಂದಿನಿಂದ: ಭಾವೈಕ್ಯತೆಯ ಸಂಗಮ ಭೂಮಿಯಾದ ಉದ್ಯಾವರ ಮಾಡ ಶ್ರೀ ಅರಸು ಮಂಜೀಷ್ಣಾರ್ ದೈವಗಳ ಕ್ಷೇತ್ರದ ವಾರ್ಷಿಕ ಉತ್ಸವ ಹಾಗೂ ಐತಿಹಾಸಿಕ ಬಂಡಿ ಮಹೋತ್ಸವ ಇಂದಿನಿಂದ(ಮೇ 8) ಮೇ.14ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಇಂದು ರಾತ್ರಿ 8 ಕ್ಕೆ ತಾಲೀಮು ಪ್ರದರ್ಶನ, 9 ಕ್ಕೆ ಧ್ವಜಾರೋಹಣ, 10 ಕ್ಕೆ ಕಂಚಿಲ ಸೇವೆ, ಕಟ್ಟೆ ದೀಪಾರಾಧನೆ, 9 ರಂದು ಸಂಜೆ 5.30 ಕ್ಕೆ ಯಕ್ಷಗಾನ ತಾಳಮದ್ದಳೆ, ರಾತ್ರಿ 9 ಕ್ಕೆ ಸಂಗೀತ ರಸಮಂಜರಿ ಬಳಿಕ 1 ರಿಂದ ಕೊಟ್ಯದಾಯನ ಅಣ್ಣ ದೈವದ ನೇಮ, ಕೆರೆ ದೀಪಾರಾಧನೆ, 10 ರಂದು ಬೆಳಿಗ್ಗೆ 9 ಕ್ಕೆ ತಮ್ಮ ದೈವದ ನೇಮ, ಮಧ್ಯಾಹ್ನ 12.30 ಕ್ಕೆ ಮಡೆಸ್ಥಾನ, ಸಂಜೆ 4.30 ಕ್ಕೆ ಮುಂಡತ್ತಾಯ ದೈವದ ನೇಮ, ರಾತ್ರಿ 7 ಕ್ಕೆ ನಡುಬಂಡಿ ಉತ್ಸವ, ಅಣ್ಣ ದೈವದ ನೇಮ, 11 ರಂದು ಬೆಳಿಗ್ಗೆ 10 ಕ್ಕೆ ತಮ್ಮ ದೈವದ ನೇಮ, ಸಂಜೆ 4 ಕ್ಕೆ ಮುಂಡತ್ತಾಯ ದೈವದ ನೇಮ, 6.30 ಕ್ಕೆ ಕಡೆಬಂಡಿ ಉತ್ಸವ, ತಮ್ಮ ದೈವದ ನೇಮ, ಸುಡುಮದ್ದು ಪ್ರದರ್ಶನ, 14 ರಂದು ರಾತ್ರಿ 10 ಕ್ಕೆ ಧ್ವಜಾವರೋಹಣ ನಡೆಯಲಿದೆ.




.jpg)
.jpg)
.jpg)
