ಜಲ್ನಾ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದನಾ ದಾಳಿಯಲ್ಲಿ ಭಾಗಿಯಾಗಿದ್ದ ಶಂಕಿತ ಉಗ್ರನೊಬ್ಬ ದಾಳಿಗೂ ಮುನ್ನ ದಿನ ನನ್ನೊಂದಿಗೆ ಮಾತನಾಡಿದ್ದ ಎಂದು ಮಹಾರಾಷ್ಟ್ರದ ಜಲ್ನಾ ನಗರದ ಯುವಕನೊಬ್ಬ ಹೇಳಿದ್ದಾರೆ.
ಭದ್ರತಾ ಸಂಸ್ಥೆ ಬಿಡುಗಡೆ ಮಾಡಿರುವ ಶಂಕಿತ ದಾಳಿಕೋರನ ರೇಖಾಚಿತ್ರವು ನನ್ನೊಂದಿಗೆ ಸಂವಾದ ನಡೆಸಿದ ವ್ಯಕ್ತಿಯೊಂದಿಗೆ ಹೋಲಿಕೆಯಾಗುತ್ತದೆ ಎಂದು ಮಾಧ್ಯಮಗಳಿಗೆ ಆದರ್ಶ್ ತಿಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ್ದ ವೇಳೆ ಏಪ್ರಿಲ್ 21ರಂದು ಅಂದರೆ ದಾಳಿಗೂ ಮುನ್ನ ದಿನ ಆಹಾರ ಮಳಿಗೆಯೊಂದರಲ್ಲಿ ಶಂಕಿತ ದಾಳಿಕೋರ ನನ್ನೊಂದಿಗೆ ಮಾತನಾಡಿದ್ದ. ಈ ವೇಳೆ ನೀವು ಹಿಂದೂ ನಾ? ಕಾಶ್ಮೀರದವರಂತೆ ಕಾಣುತ್ತಿಲ್ಲ ಎಂದು ಕೇಳಿದ್ದ. ದಾಳಿಕೋರನು ಮತ್ತೊಬ್ಬ ವ್ಯಕ್ತಿಯೊಂದಿಗೆ ಮಾತನಾಡುತ್ತ ಇಂದು ಜನಸಂದಣಿ ಕಡಿಮೆ ಇದೆ ಎಂದೂ ಹೇಳುತ್ತಿದ್ದ ಎಂದು ಆದರ್ಶ್ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ.
ಕಾಶ್ಮೀರದಲ್ಲಿ ನನಗಾದ ಅನುಭವದ ಬಗ್ಗೆ ಎನ್‌ಐಎಗೆ (ರಾಷ್ಟ್ರೀಯ ತನಿಖಾ ಸಂಸ್ಥೆ) ವಿವರವಾದ ಇ- ಮೇಲ್ ಮಾಡಿದ್ದೇನೆ. ಈ ಬಗ್ಗೆ ನನಗೆ ಯಾವುದೇ ಉತ್ತರ ಬಂದಿಲ್ಲ. ಒಂದು ವೇಳೆ ಎನ್‌ಐಎ ನನ್ನನ್ನು ಸಂಪರ್ಕಿಸಿದರೆ ತನಿಖೆಗೆ ಸಹಕಾರಿಸುತ್ತೇನೆ ಎಂದು ಆದರ್ಶ್ ಹೇಳಿದ್ದಾರೆ.
ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದನಾ ದಾಳಿಯಲ್ಲಿ 26 ಮಂದಿ ಮೃತಪಟ್ಟಿದ್ದರು.




