ಕಾಸರಗೋಡು: ಜಿಲ್ಲೆ ಸೇರಿದಂತೆ ಕೇರಳದ ನಾನಾ ಕಡೆ ಬೃಹತ್ ಪ್ರಮಾಣದಲ್ಲಿ ಮಾದಕ ದ್ರವ್ಯ ಎಂಡಿಎಂಎ ವಿತರಿಸುವ ಜಾಲದ ಇಬ್ಬರು ಸದಸ್ಯರನ್ನು ಬದಿಯಡ್ಕ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೋಯಿಕ್ಕೋಡ್ ಜಾಲಪುರಂ ಪೆರುಂಕುಳಿಪಾಡ ನಿವಾಸಿ ಪಿ. ರಂಜಿತ್ ಹಾಗೂ ಮಡಿಕೇರಿ ಮಾಡಪಳ್ಳಿ ಹೌಸ್ ನಿವಾಸಿ ಸಫಾದ್ ಎಂ.ಎ ಎಂಬವರು ಬಂಧಿತರು. ಬೆಂಗಳೂರಿನಿಂದ ಭಾರಿಪ್ರಮಾಣದಲ್ಲಿ ಎಂಡಿಎಂಎ ಕಾಸರಗೋಡು ಹಾಗೂ ಇತರ ಜಿಲ್ಲೆಗಳಿಗೆ ಪೂರೈಸುತ್ತಿದ್ದರೆನ್ನಲಾಗಿದೆ. ಬದಿಯಡ್ಕ ಠಾಣೆ ಇನ್ಸ್‍ಪೆಕ್ಟರ್ ಸುಧೀರ್ ನೇತೃತ್ವದ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿದೆ. ಬಂಧಿತರು ಜ. 24ರಂದು ಪೆರ್ಲ ತಪಾಸಣಾ ಕೇಂದ್ರದಿಂದ ಪೊಲೀಸರು 83.890ಗ್ರಾಂ ಎಂಡಿಎಂಎ ವಶಪಡಿಸಿಕೊಂಡ ಪ್ರಕರಣದಲ್ಲೂ ಅರೋಪಿಗಳಾಗಿದ್ದಾರೆ. ಬಂಧಿತರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಬೆಂಗಳೂರಿನ ಅಕ್ರಮ ಎಂಡಿಎಂಎ ತಯಾರಿ ಕೇಂದ್ರಗಳ ಏಜೆಂಟರ ಮೂಲಕ ಕಾಸರಗೋಡು ಸೇರಿದಂತೆ ಕೇರಳದ ವಿವಿಧ ಜಿಲ್ಲೆಗಳಿಗೆ ಮಾದಕ ದ್ರವ್ಯ ಪೂರೈಸುವ ಪ್ರಧಾನ ಕೊಂಡಿಗಳಾಗಿದ್ದರೆ ಎಂದು ಪೊಲೀಸರು ತಿಳಿಸಿದ್ದಾರೆ.





