ತಿರುಪತಿ: ತಿರುಮಲ ತಿರುಪತಿ ದೇವಸ್ಥಾನಕ್ಕೆ ಬರುವ ಭಕ್ತರು ಅಭಿಪ್ರಾಯ ಹಂಚಿಕೊಳ್ಳಲು ಆಡಳಿತ ಮಂಡಳಿ ವಾಟ್ಸ್‌ಆಯಪ್ ಆಧಾರಿತ ವ್ಯವಸ್ಥೆಯನ್ನು ಶುಕ್ರವಾರ ಜಾರಿಗೆ ತಂದಿದೆ.
ದೇಗುಲದ ವಿವಿಧ ಜಾಗಗಳಲ್ಲಿ ಕ್ಯೂಆರ್ ಕೋಡ್ ಇಡಲಾಗಿದೆ. ಅದನ್ನು ಸ್ಕ್ಯಾನ್ ಮಾಡಿದರೆ, ನೇರವಾಗಿ ವಾಟ್ಸ್‌ಆಯಪ್ ತೆರೆದುಕೊಳ್ಳುತ್ತದೆ.
ಅಲ್ಲಿ ಅಭಿಪ್ರಾಯಗಳನ್ನು ಬರಹ, ವಿಡಿಯೊಗಳ ಮೂಲಕ ಹಂಚಿಕೊಳ್ಳಬಹುದು. ಜತೆಗೆ ರೇಟಿಂಗ್ ಕೂಡ ಕೊಡಬಹುದು. ಅದನ್ನು ಆಧರಿಸಿ ಟಿಟಿಡಿ ದೇಗುಲದಲ್ಲಿ ಆಗಬೇಕಾದ ಸುಧಾರಣೆ ಬಗ್ಗೆ ಗಮನಹರಿಸಲಿದೆ ಎಂದು ತಿರುಮಲ ತಿರುಪತಿ ದೇವಸ್ಥಾನಮ್ (ಟಿಟಿಡಿ)ಪ್ರಕಟಣೆಯಲ್ಲಿ ತಿಳಿಸಿದೆ.
ಈ ವ್ಯವಸ್ಥೆಯ ಮೂಲಕ ಭಕ್ತರು ದೇಗುಲದಲ್ಲಿನ ಸೇವೆ, ಸೌಲಭ್ಯಗಳಾದ ಅನ್ನ ಪ್ರಸಾದ, ಸ್ವಚ್ಛತೆ, ಲಡ್ಡು ಪ್ರಸಾದ, ಲಗೇಜ್ ರೂಮ್ ಸೇರಿದಂತೆ ಎಲ್ಲಾ ರೀತಿಯ ವ್ಯವಸ್ಥೆ ಬಗ್ಗೆ ಅಭಿಪ್ರಾಯಗಳನ್ನು ಹಂಚಿಕೊಳ್ಳಬಹುದು. ಇದು ದೇಗುಲದಲ್ಲಿನ ಸೇವೆಯ ಗುಣಮಟ್ಟ, ಭಕ್ತರ ತೃಪ್ತಿ, ಪಾರದರ್ಶಕತೆಯನ್ನು ಸುಧಾರಿಸುವ ಉದ್ದೇಶವನ್ನು ಹೊಂದಿದೆ ಎಂದು ಟಿಟಿಡಿ ಪ್ರಕಟಣೆಯಲ್ಲಿ ತಿಳಿಸಿದೆ.
ಏ.2ರಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ತಿರುಮಲ ತಿರುಪತಿ ದೇವಳಗಳ (TTD) ಸಮಗ್ರ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿ, ವಾಟ್ಸ್‌ಆಯಪ್ ಆಧಾರಿತ ದೇವಾಲಯದ ಸೌಲಭ್ಯಗಳನ್ನು ಶೀಘ್ರದಲ್ಲಿ ಆರಂಭಿಸುವುದಾಗಿ ಹೇಳಿದ್ದರು. ಜತೆಗೆ ಅಕ್ರಮಗಳ ತಡೆಗೆ ಆಧಾರ್ ಗುರುತಿನ ಚೀಟಿ ಆಧಾರಿತ ಸೌಲಭ್ಯಗಳನ್ನೂ ಜಾರಿಗೊಳಿಸಲಾಗುವುದು ಎಂದು ಭರವಸೆ ನೀಡಿದ್ದರು.
ಇದೇ ವೇಳೆ, ಟಿಟಿಡಿಗೆ ಸೇರಿದ ಕರೀಂನಗರ, ಕೊಡಾಂಗಲ್, ನವಿ ಮುಂಬೈ, ಬಾಂದ್ರಾ, ಉಳಂದೂರ್‌ಪೇಟ್ ಹಾಗೂ ಕೊಯಮತ್ತೂರ್‌ನಲ್ಲಿನ ದೇವಾಲಯಗಳ ಅಭಿವೃದ್ಧಿ ಕಾರ್ಯಗಳ ಮಾಹಿತಿಯನ್ನೂ ನಾಯ್ಡು ಪಡೆದಿದ್ದರು.




