ನವದೆಹಲಿ: ನ್ಯಾಷನಲ್ ಹೆರಾಲ್ಡ್ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಸಿದಂತೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹಾಗೂ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಗೆ ಶುಕ್ರವಾರ ದೆಹಲಿ ನ್ಯಾಯಾಲಯವು ನೋಟಿಸ್ ಜಾರಿ ಮಾಡಿದೆ.
'ಯಾವುದೇ ಹಂತದಲ್ಲಿ ವಿಚಾರಣೆ ನಡೆಸುವ ಹಕ್ಕು ನ್ಯಾಯಯುತ ವಿಚಾರಣೆಗೆ ಜೀವ ತುಂಬುತ್ತದೆ' ಎಂದು ವಿಶೇಷ ನ್ಯಾಯಾಲಯದ ನ್ಯಾಯಾಧೀಶ ವಿಶಾಲ್ ಗೋಗ್ನೆ ತಿಳಿಸಿದ್ದಾರೆ.
ಈ ಪ್ರಕರಣದ ವಿಚಾರಣೆಯನ್ನು ಮೇ 8ಕ್ಕೆ ಮೂಂದೂಡಲಾಗಿದೆ ಎಂದು ವಿಶಾಲ್ ಗೋಗ್ನೆ ತಿಳಿಸಿದ್ದಾರೆ.
'ಕಾಯ್ದೆಯಲ್ಲಿನ ಹೊಸ ಅವಕಾಶಗಳ ಪ್ರಕಾರ, ಆರೋಪಿಗಳ ಹೇಳಿಕೆಗಳನ್ನು ಪಡೆಯದೇ ಅವರ ವಿರುದ್ಧದ ಆರೋಪಪಟ್ಟಿಯನ್ನು ಪರಿಗಣಿಸಲು ಸಾಧ್ಯವಿಲ್ಲ' ಎಂದು ಈ ಪ್ರಕರಣ ಸಂಬಂಧ ಗೋಗ್ನೆ ಇತ್ತೀಚೆಗೆ ಹೇಳಿದ್ದರು.
ಸುಬ್ರಮಣಿಯನ್ ಸ್ವಾಮಿ ಅವರ ದೂರನ್ನು ಪಟಿಯಾಲಾ ಹೌಸ್‌ನ ಮೆಟ್ರೊಪಾಲಿಟನ್ ನ್ಯಾಯಾಧೀಶರು 2014ರ ಜೂನ್ 26ರಂದು ಪರಿಗಣನೆಗೆ ತೆಗೆದುಕೊಂಡರು. ಈ ಬಗ್ಗೆ ಜಾರಿ ನಿರ್ದೇಶನಾಲಯವು 2021ರಂದು ತನಿಖೆ ಆರಂಭಿಸಿತು. ಪ್ರಕರಣದಲ್ಲಿ ಸೋನಿಯಾ ಗಾಂಧಿ ಅವರು ಒಂದನೇ ಆರೋಪಿಯಾಗಿದ್ದರೆ, ರಾಹುಲ್ ಗಾಂಧಿ ಅವರು ಎರಡನೇ ಆರೋಪಿ ಆಗಿದ್ದಾರೆ. ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್‌ಎ) ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಆರೋಪಿಗಳ ವಿರುದ್ಧ ದೋಷಾರೋಪ ನಿಗದಿ ಮಾಡಲಾಗಿದೆ. ಜಾರಿ ನಿರ್ದೇಶನಾಲಯವು ಪ್ರಕರಣದ ಸಂಬಂಧ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರನ್ನು 2022ರಲ್ಲಿ ದೀರ್ಘ ವಿಚಾರಣೆಗೆ ಒಳಪಡಿಸಿತ್ತು.
ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್‌ನ (ಎಜೆಎಲ್) ಸಾವಿರಾರು ಕೋಟಿ ಮೌಲ್ಯದ ಆಸ್ತಿಯನ್ನು ಸ್ವಾಧೀನಕ್ಕೆ ಪಡೆಯುವ ಸಲುವಾಗಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಸ್ಯಾಮ್ ಪಿತ್ರೊಡಾ, ಸುಮನ್ ದುಬೆ ಮತ್ತು ಇತರ ಕಾಂಗ್ರೆಸ್ ನಾಯಕರು ಕ್ರಿಮಿನಲ್ ಪಿತೂರಿ ನಡೆಸಿದ್ದಾರೆ; ಯಂಗ್ ಇಂಡಿಯನ್ ಲಿಮಿಟೆಡ್ ಮೂಲಕ, ₹2,000 ಕೋಟಿ ಮೌಲ್ಯದ ಆಸ್ತಿಯನ್ನು ಸೋನಿಯಾ ಮತ್ತು ರಾಹುಲ್ ಅವರು ಕೇವಲ ₹50 ಲಕ್ಷಕ್ಕೆ ಸ್ವಾಧೀನ ಪಡಿಸಿಕೊಂಡಿದ್ದಾರೆ. ಹಾಗೂ ಕಾಂಗ್ರೆಸ್ ಪಕ್ಷವು ಎಜೆಎಲ್‌ಗೆ ನೀಡಿದ್ದ ₹90.2 ಕೋಟಿ ಸಾಲವನ್ನು 9.02 ಕೋಟಿಯ ಈಕ್ವಿಟಿ ಷೇರುಗಳನ್ನಾಗಿ ಪರಿವರ್ತಿಸಿ ಯಂಗ್ ಇಂಡಿಯನ್‌ಗೆ ವರ್ಗಾಯಿಸಲಾಗಿದೆ ಎಂದು ಇ.ಡಿ. ದೋಷಾರೋಪ ಪಟ್ಟಿಯಲ್ಲಿ ತಿಳಿಸಿದೆ.




