ಕಾಸರಗೋಡು: ಭಾರತ-ಪಾಕ್ ನಡುವೆ ಯುದ್ಧ ಭೀತಿ ಆವರಿಸಿರುವ ಹಿನ್ನೆಲೆಯಲ್ಲಿ ವಾಯು ದಾಳಿ ನಡೆದಲ್ಲಿ ಸುರಕ್ಷತೆ ಕಾಯ್ದುಕೊಳ್ಳಲು ಕಲ್ಪಿತ ಕಾರ್ಯಾಚರಣೆಯನ್ವಯ ಜಿಲ್ಲೆಯ ಮೂರು ಕೇಂದ್ರಗಳಲ್ಲಿ ಸುರಕ್ಷಾ ತಾಲೀಮು ಕೈಗೊಳ್ಳಲಾಯಿತು. ಕಾಸರಗೋಡು ಸಿವಿಲ್ ಸ್ಟೇಶನ್, ಕಾಸರಗೋಡು ಹಾಗೂ ಹೊಸದುರ್ಗ ಆರ್.ಡಿ.ಓ ಕಚೇರಿಗಳಲ್ಲಿ ಕಲ್ಪಿತ ಕಾರ್ಯಾಚರಣೆ ಆಯೋಜಿಸಲಾಯಿತು. ಏಕಾಏಕಿ ಆರಂಭಗೊಂಡ ಮುಗಿಲು ಮುಟ್ಟುವ ಸೈರನ್‍ನಿಂದ ಜನತೆ ಆತಂಕಕ್ಕೊಳಗಾದರು. ಬಾಂಬು ಸ್ಪೋಟವನ್ನು ಬಿಂಬಿಸುವ ರೀತಿಯ ಶಬ್ದದೊಂದಿಗೆ ಜನತೆ ದಿಕ್ಕಾಪಾಲಾಗಿ ಓಡುವ ಸನ್ನಿವೇಶ ಯುದ್ಧದ ಸನ್ನಿವೇಶ ಸೃಷ್ಟಿಸಿದ್ದು, ತಕ್ಷಣ ಅಗ್ನಿಶಾಮಕದಳ, ಪೊಲೀಸ್, ವಿಪತ್ತು ನಿರ್ವಹಣಾ ಪಡೆ ಸಕಲ ಸಿದ್ಧತೆಯೊಂದಿಗೆ ಕಚೇರಿಯೊಳಗೆ ಸಿಲುಕಿಕೊಂಡಿದ್ದವರನ್ನು ರಕ್ಷಿಸಿ ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ನೀಡಿ, ಇತರ ಗಾಯಾಳುಗಳನ್ನು ಆಂಬುಲೆನ್ಸ್ ವಾಹನಗಳ ಮೂಲಕ ಕಾಸರಗೋಡು ಜನರಲ್ ಆಸ್ಪತ್ರೆಗೆ ದಾಖಲಿಸಲಾಯಿತು. ಆಸ್ಪತ್ರೆ ವೈದ್ಯರು, ಸಿಬ್ಬಂದಿ ಗಾಯಾಳುಗಳನ್ನು ಉಪಚರಿಸಿದರು. ಒಟ್ಟು ಘಟನೆ ಯುದ್ಧದ ಸನ್ನಿವೇಶ ಸೃಷ್ಟಿಸಿದ್ದು, ದಾಳಿ ನಡೆದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುವ ರೀತಿ, ಸಂದಿಗ್ಧತೆಯಲ್ಲಿ ಸಿಲುಕಿದವರನ್ನು ಹೇಗೆ ರಕ್ಷಿಸಬೇಕೆಂಬ ಬಗ್ಗೆ ಕವಾಯತಿನಲ್ಲಿ ಮಾಹಿತಿ ನೀಡಲಾಯಿತು.
ನಾಗರಿಕ ರಕ್ಷಾ ಪಡೆಗಳು, ಎನ್‍ಸಿಸಿ, ಸ್ಟೂಡೆಂಟ್ ಪೊಲೀಸ್ ಕಲ್ಪಿತ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಯುದ್ಧದ ಸಂದರ್ಭ ಕಟ್ಟಡದೊಳಗೆ ಸಿಲುಕಿಕೊಂಡವರನ್ನು ಯಾವ ರೀತಿ ರಕ್ಷಿಸಬೇಕು ಎಂಬ ಬಗ್ಗೆ ಮಾಹಿತಿ ನೀಡಲಾಯಿತು.




