ಕೊಚ್ಚಿ: ಪಹಲ್ಗಾಂ ಭಯೋತ್ಪಾದಕ ದಾಳಿಯ ಮುಖ್ಯ ಸೂತ್ರಧಾರ, ಲಷ್ಕರ್-ಎ-ತೊಯ್ಬಾದ ಉಪಸಂಘಟನೆ, ದಿ ರೆಸಿಸ್ಟೆನ್ಸ್ ಫ್ರಂಟ್ ಮುಖ್ಯಸ್ಥ ಷೇಖ್ ಸಜ್ಜಾದ್ ಗುಲ್(50)ಕೇರಳದೊಂದಿಗೂ ಸಂಪರ್ಕ ಹೊಂದಿದ್ದ ಸ್ಪೋಟಕ ಮಾಹಿತಿ ಹೊರಬಿದ್ದಿದೆ. ಕೇರಳ-ಕರ್ನಾಟಕ ಕೇಂದ್ರೀಕರಿಸಿ ಉನ್ನತ ಶಿಕ್ಷಣ ಪಡೆದು ಭಾರತದಲ್ಲೇ ತಂಗಿದ್ದ ಈತ ಲ್ಯಾಬ್ ಟೆಕ್ನಿಶಿಯನ್ ಕಲಿಕೆಗಾಗಿ ಕೇರಳಕ್ಕೆ ಆಗಮಿಸಿದ್ದು, ಹಲವರೊಂದಿಗೆ ಸಂಪರ್ಕ ಬೆಳೆಸಿಕೊಂಡಿದ್ದನೆನ್ನಲಾಗಿದೆ.
ಈತ ಪೆಹಲ್ಗಾಂನಲ್ಲಿ 26ಭಾರತೀಯ ಹಿಂದೂಗಳನ್ನು ಮತ, ಧರ್ಮ ವಿಭಜಿಸಿ ಕೊಲ್ಲುವ ಕ್ರೂರ ಕೃತ್ಯಕ್ಕೆ ನೇತೃತ್ವ ನೀಡಿರುವುದನ್ನು ಎನ್.ಐ.ಎ ಪತ್ತೆಹಚ್ಚಿತ್ತು. ಶ್ರೀನಗರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಬಳಿಕ ಬೆಂಗಳೂರಿನಲ್ಲಿ ಎಂಬಿಎ ಪೂರೈಸಿ ನಂತರ ಕೇರಳದಲ್ಲಿ ಲ್ಯಾಬ್ ಟೆಕ್ನೀಷಿಯನ್ ಕೋರ್ಸ್ ಮಾಡಿದ್ದನು. ಅನಂತರ ಕಾಶ್ಮೀರಕ್ಕೆ ಮರಳಿ ಅಲ್ಲಿ ಲ್ಯಾಬ್ ತೆರೆದು ಉಗ್ರಗಾಮಿ ಕೃತ್ಯಕ್ಕೆ ನೆರವು ನೀಡಲಾರಂಭಿಸಿದ್ದನು. ನಂತರ ಭಯೋತ್ಪಾದಕ ಕೃತ್ಯಕ್ಕೆ ಮುಂದಾಗಿ 2002ರಲ್ಲಿ ದೆಹಲಿ ನಿಜಾಮುದ್ದೀನ್ ರೈಲ್ವೇ ನಿಲ್ದಾಣದಿಂದ 5ಕಿಲೋ ಆರ್.ಡಿ.ಎಕ್ಸ್ ಸಹಿತ ಸೆರೆಯಾಗಿದ್ದನು. 2003ರಲ್ಲಿ ಈ ಕೇಸಿನಲ್ಲಿ 10ವರ್ಷಗಳ ಶಿಕ್ಷೆಯ ನಂತರ 2017ರಲ್ಲಿ ಬಿಡುಗಡೆಗೊಂಡಿದ್ದನು.
ಅನಂತರ ಪಾಕಿಸ್ತಾನಕ್ಕೆ ತಲುಪಿದ ಈತನನ್ನು ಐಸಿಸ್ ಜತೆ ಸೇರಿಸಿಕೊಂಡು, ಪ್ರತ್ಯೇಕ ತರಬೇತಿಯನ್ನಿತ್ತು ಲಷ್ಕರ್-ಎ-ತೊಯ್ಬಾದ ಅಧೀನದಲ್ಲಿರುವ ಟಿ.ಆರ್.ಎಫ್.ನ ಮುಖ್ಯಸ್ಥನನ್ನಾಗಿ ನಿಯಮಿಸಿತ್ತು. ಜಮ್ಮುಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿ ನಡೆಸುವ ಹೊಣೆಯನ್ನು ಟಿ.ಆರ್.ಎಫ್ ಈತನಿಗೇ ವಹಿಸಿತ್ತೆನ್ನಲಾಗಿದೆ.
ಎಲ್ಲಿದ್ದಾರೆ ಕೇರಳೀಯರು:
ಕಾಸರಗೋಡಿನ ಚಂದೇರ ಪೊಲೀಸ್ ಠಾಣೆ ವ್ಯಾಪ್ತಿಯಿಂದ ಸೇರಿದಂತೆ ಕೇರಳದ ಹಲವು ಮಂದಿ ಐಸಿಸ್ ಉಗ್ರ ಸಂಘಟನೆಗೆ ಸೇರ್ಪಡೆಗೊಳ್ಳಲು ತೆರಳಿದ್ದವರ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಲಭಿಸಿಲ್ಲ. ಇವರಲ್ಲಿ ಕೆಲವರು ಐಸಿಸ್ ಹಾಗೂ ಭದ್ರತಾಪಡೆ ನಡುವೆ ನಡೆದ ಯುದ್ಧದಲ್ಲಿ ಹತರಾಗಿದ್ದರೆ, ಉಳಿದವರು ಎಲ್ಲಿದ್ದಾರೆ ಎಂಬ ಬಗ್ಗೆ ಮಾಹಿತಿಯಿಲ್ಲದಾಗಿದೆ. 2016ರಲ್ಲಿ ಕಾಸರಗೋಡಿನ 16ಮಂದಿ ಸೇರಿದಂತೆ ಹಲವರು ಕೇರಳದಿಂದ ಐಸಿಸ್‍ಗೆ ಸೇರ್ಪಡೆಗೊಂಡಿದ್ದಾರೆ.




