ನವದೆಹಲಿ: ಸುಪ್ರೀಂಕೋರ್ಟ್‌ನ ಮಹಿಳಾ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರು ಸುಪ್ರೀಂಕೋರ್ಟ್‌ನ ಐವರು ಸದಸ್ಯರನ್ನು ಒಳಗೊಂಡ ಕೊಲಿಜಿಯಂನ (ಹಿರಿಯ ನ್ಯಾಯಮೂರ್ತಿಗಳ ಮಂಡಳಿ) ಸದಸ್ಯರಾಗಿದ್ದಾರೆ.
ನ್ಯಾ. ಅಭಯ್ ಎಸ್ ಓಕಾ ಅವರು ನಿವೃತ್ತಿಯ ಬಳಿಕ ನಾಗರತ್ನ ಕೊಲಿಜಿಯಂನ ಭಾಗವಾದರು. ಮುಂದಿನ ದಿನಗಳಲ್ಲಿ ಬಿ.ವಿ.ನಾಗರತ್ನ ಅವರು ಸುಪ್ರೀಂಕೋರ್ಟ್‌ನ ಸಿಜೆಐ ಆಗುವ ಸರದಿಯಲ್ಲಿದ್ದಾರೆ.
ಕರ್ನಾಟಕದ ಮಂಡ್ಯದವರಾದ ಬಿ.ವಿ.ನಾಗರತ್ನ ನಾಳೆ (ಭಾನುವಾರ ಮೇ 25) ಅಧಿಕೃತವಾಗಿ ಕೊಲಿಜಿಯಂನ ಸದಸ್ಯರಾಗುವರು. ಸಿಜೆಐ ಸ್ಥಾನದಿಂದ ಅವರು ನಿವೃತ್ತಿ ಆಗುವವರೆಗೂ (2027ರ ಅಕ್ಟೋಬರ್ 29) ಕೊಲಿಜಿಯಂನಲ್ಲಿ ಇರಲಿದ್ದಾರೆ.
ಸಿಜೆಐ ಬಿ.ಆರ್.ಗವಾಯಿ, ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾ. ವಿಕ್ರಮ್ ನಾಥ್, ನ್ಯಾ. ಜೆ.ಕೆ.ಮಾಹೇಶ್ವರಿ ಮತ್ತು ನ್ಯಾ. ಬಿ.ವಿ.ನಾಗರತ್ನ ಕೊಲಿಜಿಯಂನಲ್ಲಿ ಇರಲಿದ್ದಾರೆ.
2027ರ ಸೆಪ್ಟೆಂಬರ್ 23ರಿಂದ ಒಂದು ತಿಂಗಳವರೆಗೂ ಭಾರತದ ಮೊದಲ ಮಹಿಳಾ ಸಿಜೆಐ ಆಗಿ ಕಾರ್ಯ ನಿರ್ವಹಣೆ ಮಾಡಲಿರುವ ನ್ಯಾ. ಬಿ.ವಿ.ನಾಗರತ್ನ ಅವರ ಸೇವಾವಧಿ 2027ರ ಅಕ್ಟೋಬರ್ 29ರಂದು ಕೊನೆಗೊಳ್ಳಲಿದೆ.
ನಿವೃತ್ತ ಸಿಜೆಐ ಪುತ್ರಿ ಬಿ.ವಿ.ನಾಗರತ್ನ:
ಬಿ.ವಿ.ನಾಗರತ್ನ ಅವರು ಸುಪ್ರೀಂಕೋರ್ಟ್‌ನ ನಿವೃತ್ತ ಮುಖ್ಯನ್ಯಾಯಮೂರ್ತಿ ಇ.ಎಸ್. ವೆಂಕಟರಾಮಯ್ಯ ಅವರ ಪುತ್ರಿ. ಜನಿಸಿದ್ದು 30 ಅಕ್ಟೋಬರ್ 1962ರಲ್ಲಿ. 1987ರಲ್ಲಿ ವಕೀಲರಾಗಿ ಬೆಂಗಳೂರಿನಲ್ಲಿ ನೋಂದಣಿ ಮಾಡಿಸಿದರು. ಸಂವಿಧಾನ, ವಾಣಿಜ್ಯ, ವಿಮೆ ಮತ್ತು ಸೇವಾ ವಿಷಯಗಳ ಕ್ಷೇತ್ರದಲ್ಲಿ ಇವರು ಅಭ್ಯಾಸ (ಪ್ರಾಕ್ಟೀಸ್) ನಡೆಸಿದರು.
2008ರ ಫೆಬ್ರವರಿ 18ರಂದು ಕರ್ನಾಟಕ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರು. 2010ರ ಫೆಬ್ರವರಿ 17ರಂದು ಖಾಯಂ ನ್ಯಾಯಮೂರ್ತಿಯಾದರು.




