ಚೆನ್ನೈ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಸಶಸ್ತ್ರ ಪಡೆಯು 'ಆಪರೇಷನ್ ಸಿಂಧೂರ' ಮೂಲಕ ದಿಟ್ಟ ಉತ್ತರ ನೀಡಿದೆ. ಈ ಮೂಲಕ ಭಾರತ ಭಯೋತ್ಪಾದನೆ ಎದುರು ಬಗ್ಗುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಜಗತ್ತಿಗೆ ರವಾನಿಸಿದೆ ಎಂದು ನಟ, ರಾಜಕಾರಣಿ ಕಮಲ್ ಹಾಸನ್ ಸೋಮವಾರ ತಿಳಿಸಿದ್ದಾರೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, 'ಇದು ವಿಜಯೋತ್ಸವದ ಸಮಯವಲ್ಲ, ಬದಲಾಗಿ ಬಲಿಷ್ಠ ಭಾರತವನ್ನು ಮತ್ತಷ್ಟು ಬಲಪಡಿಸಲು ಚಿಂತನೆ ನಡೆಸುವ ಸಮಯ' ಎಂದು ಕಮಲ್ ತಿಳಿಸಿದ್ದಾರೆ.
'ಭಯೋತ್ಪಾದನೆಯ ಎದುರು ಭಾರತ ಬಗ್ಗುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಜಗತ್ತಿಗೆ ರವಾನಿಸಿದೆ. ದಿಟ್ಟ ಉತ್ತರ ಕೊಟ್ಟ ಸೇನೆ ಮತ್ತು ಕೇಂದ್ರ ಸರ್ಕಾರವನ್ನು ಶ್ಲಾಘಿಸುತ್ತೇನೆ' ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. .
'ಕಣ್ಣುಗಳಲ್ಲಿ ತ್ರಿವರ್ಣ ಧ್ವಜ, ಕರ್ತವ್ಯದಿಂದ ತುಂಬಿದ ಹೃದಯ, ಅಪಾಯದ ಎದುರು ನಿಂತಿದ್ದ ವೀರಯೋಧರ 'ಧೈರ್ಯ' ಅಚಲವಾದದ್ದು. 'ನೀವು ಭಾರತದ ಹೆಮ್ಮೆ, ನಮ್ಮನ್ನು ರಕ್ಷಿಸುತ್ತಿದ್ದೀರಿ, ಶಾಂತಿಯನ್ನು ಕಾಪಾಡುತ್ತಿದ್ದೀರಿ' ಎಂದು ಸಶಸ್ತ್ರ ಪಡೆಗಳನ್ನು ಕಮಲ್ ಶ್ಲಾಘಿಸಿದ್ದಾರೆ.
ಕಠಿಣ ಸಮಯದಲ್ಲಿ ದೇಶದಾದ್ಯಂತ ಜನರು ಒಂದೇ ಶಕ್ತಿಯಾಗಿ ಒಗ್ಗಟ್ಟಿನಿಂದ ಇದ್ದರು ಎಂದು ಕಮಲ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.




