ಢಾಕಾ: ಬಾಂಗ್ಲಾದೇಶದಲ್ಲಿ ಸರ್ಕಾರಿ ನೌಕರರ ಪ್ರತಿಭಟನೆಗೆ ಪ್ರಾಥಮಿಕ ಶಾಲಾ ಶಿಕ್ಷಕರು ಕೂಡ ಕೈ ಜೋಡಿಸಿದ್ದು, ಮಧ್ಯಂತರ ಸರ್ಕಾರದ ಮುಖ್ಯಸ್ಥ ಮೊಹಮ್ಮದ್ ಯೂನಸ್ ಸರ್ಕಾರದ ಮೇಲೆ ಒತ್ತಡ ಹೆಚ್ಚಿಸಿದೆ.
ಸರ್ಕಾರಿ ನೌಕರರು ದುರ್ನಡತೆ ತೋರಿದರೆ, ಅವರನ್ನು ಕೆಲಸದಿಂದ ವಜಾಗೊಳಿಸಲು ಸಾರ್ವಜನಿಕ ಆಡಳಿತ ಸಚಿವಾಲಯಕ್ಕೆ ಅನುಮತಿ ನೀಡುವ ಸುಗ್ರೀವಾಜ್ಞೆಯನ್ನು ಭಾನುವಾರ ಸರ್ಕಾರ ಹೊರಡಿಸಿತ್ತು.
ಇದಕ್ಕೆ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗಿದ್ದು, ನೌಕರರು ಪ್ರತಿಭಟನೆ ಆರಂಭಿಸಿದ್ದಾರೆ. ಸಚಿವಾಲಯದ ಒಳಗೆ ನುಗ್ಗಲು ಯತ್ನಿಸಿದ ಪ್ರತಿಭಟನಕಾರರನ್ನು ಪ್ರವೇಶದ್ವಾರದಲ್ಲೇ ತಡೆಯಲಾಗಿದೆ.
ಸುಗ್ರೀವಾಜ್ಞೆಯು ದಮನಕಾರಿ ನಿರ್ಧಾರವಾಗಿದ್ದು, ಕೂಡಲೇ ಹಿಂದಕ್ಕೆ ಪಡೆಯಬೇಕು ಎಂದು ಸರ್ಕಾರಿ ನೌಕರರು ಒತ್ತಾಯಿಸಿದ್ದಾರೆ.
ಈ ನಡುವೆ ವೇತನ ಹೆಚ್ಚಳಕ್ಕೆ ಒತ್ತಾಯಿಸಿ, ಸರ್ಕಾರಿ ಶಾಲೆಯ ಸಾವಿರಾರು ಶಿಕ್ಷಕರು ದೇಶದಾದ್ಯಂತ ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಿದರು.
ದೇಶದಲ್ಲಿ ತಲೆದೋರಿರುವ ರಾಜಕೀಯ ಅಸ್ಥಿರತೆ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದ ಬಾಂಗ್ಲಾದೇಶ ಸೇನಾ ಮುಖ್ಯಸ್ಥ ವಾಕರ್-ಉಜ್ ರೆಹಮಾನ್, ಡಿಸೆಂಬರ್‌ನಲ್ಲಿ ಚುನಾವಣೆ ನಡೆಸುವ ಕುರಿತು ಕಳೆದ ವಾರದ ಭಾಷಣದಲ್ಲಿ ಉಲ್ಲೇಖಿಸಿದ್ದರು.




