ಕಾಸರಗೋಡು: ಕಾಸರಗೋಡು ಹಳೆಯ ಬಸ್ ನಿಲ್ದಾಣದಲ್ಲಿರುವ ಬಸ್ ಕಾಯುವ ಕೇಂದ್ರವನ್ನು(ತಂಗುದಾಣ) ಪುನಃಸ್ಥಾಪಿಸಲು ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ನ್ಯಾಯಾಂಗ ಸದಸ್ಯ ಕೆ. ಬೈಜುನಾಥ್ ಕಾಸರಗೋಡು ನಗರಸಭೆ ಕಾರ್ಯದರ್ಶಿಗೆ ಸೂಚನೆಗಳನ್ನು ನೀಡಿದ್ದಾರೆ. ಕೋವಿಡ್‍ಗೂ ಮೊದಲು ಇಲ್ಲಿ ಮೂರು ಬಸ್ ಶೆಲ್ಟರ್‍ಗಳು ಇದ್ದವು, ಆದರೆ ಈಗ ಅವು ಇಲ್ಲ ಎಂಬ ದೂರುಗಳನ್ನು ಅನುಸರಿಸಿ ಆಯೋಗ ಈ ಆದೇಶ ನೀಡಿದೆ.
ಎಂ.ಜಿ.ರಸ್ತೆಯ ಪಾದಚಾರಿ ಮಾರ್ಗದಲ್ಲಿ ವ್ಯಾಪಾರ ಮಾಡುವವರಿಗೆ ಪುನರ್ವಸತಿ ಕಲ್ಪಿಸಲು ಕಟ್ಟಡ ನಿರ್ಮಾಣ ಪೂರ್ಣಗೊಂಡ ನಂತರ ಅತ್ಯಾಧುನಿಕ ಬಸ್ ಶೆಲ್ಟರ್ ನಿರ್ಮಿಸಲಾಗುವುದು ಎಂದು ನಗರಸಭೆ ಕಾರ್ಯದರ್ಶಿ ಆಯೋಗಕ್ಕೆ ಮಾಹಿತಿ ನೀಡಿದರು. ಇಲ್ಲಿ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸುವ ಯೋಜನೆಯೂ ಇದೆ. ಸ್ವಚ್ಛ ಭಾರತ ಮಿಷನ್ ಯೋಜನೆಯಲ್ಲಿ ಸೇರಿಸಲು ಅನುಮೋದನೆ ನೀಡಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಸೂಕ್ತ ಸ್ಥಳ ಲಭ್ಯವಾದ ತಕ್ಷಣ ನಿರ್ಮಾಣ ಕಾರ್ಯ ಪ್ರಾರಂಭವಾಗಲಿದೆ ಮತ್ತು ಹೊಸ ಬಸ್ ಕಾಯುವ ಕೇಂದ್ರಕ್ಕಾಗಿ 10 ಲಕ್ಷ ರೂ.ಗಳ ನಿಧಿಯನ್ನು ಮೀಸಲಿಡಲಾಗಿದೆ ಎಂದು ವರದಿ ಸೂಚಿಸುತ್ತದೆ. ಆದರೆ, ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಲು ಇನ್ನೂ ಭೂಮಿಯನ್ನು ಪಡೆದುಕೊಂಡಿಲ್ಲ. ಭೂಮಿ ಉಚಿತವಾಗಿ ಲಭ್ಯವಿದ್ದರೆ ಇದನ್ನು ಪರಿಗಣಿಸಲಾಗುವುದು ಎಂದು ವರದಿಯಲ್ಲಿ ಹೇಳಲಾಗಿದೆ.
ಆದೇಶ ಬಂದ ಎರಡು ತಿಂಗಳೊಳಗೆ ಬಸ್ ಕಾಯುವ ಕೇಂದ್ರದ ನಿರ್ಮಾಣಕ್ಕೆ ಸಂಬಂಧಿಸಿದ ವಿವರವಾದ ವರದಿಯನ್ನು ಸಲ್ಲಿಸುವಂತೆ ಆಯೋಗವು ನಗರಸಭೆ ಕಾರ್ಯದರ್ಶಿಯನ್ನು ಕೇಳಿದೆ. ನೆಕ್ರಾಜೆ ಮೂಲದ ಪಿ. ಪುರುಷೋತ್ತಮನ್ ಸಲ್ಲಿಸಿದ ದೂರಿನ ಆಧಾರದ ಮೇಲೆ ಆಯೋಗ ತನಿಖೆ ನಡೆಸಿ ಕ್ರಮ ಕೈಗೊಂಡಿದೆ.






