ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ 66ರ ತಲಪ್ಪಾಡಿ-ಚೆಂಗಳ ಮೊದಲ ರೀಚ್ ಕೆಲಸ ಪೂರ್ಣಗೊಳ್ಳುವ ಹಂತದಲ್ಲಿರುವ ಮಧ್ಯೆ ಕುಂಬಳೆಯಲ್ಲಿ ಟೋಲ್‍ಗೇಟ್ ಸ್ಥಾಪಿಸುವ ಆರಂಭಿಕ ಹಂತಗಳನ್ನು ಕೈಬಿಡುವಂತೆ ಜಿಲ್ಲಾ ಅಭಿವೃದ್ಧಿ ಸಮಿತಿ ಸಭೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವನ್ನು ಕೇಳಿಕೊಂಡಿದೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಜಿಲ್ಲಾ ಅಭಿವೃದ್ದಿ ಸಮಿತಿ ಸಭೆಯಲ್ಲಿ ಶಾಸಕ ಎ.ಕೆ.ಎಂ. ಅಶ್ರಫ್ ವಿಷಯ ಪ್ರಸ್ತಾಪಿಸಿ, ಜಿಲ್ಲಾ ಅಭಿವೃದ್ಧಿ ಸಮಿತಿ ಸಭೆ ಈ ಬಗ್ಗೆ ಹೆದ್ದರಿ ಪ್ರಾಧಿಕರಕ್ಕೆ ಮನವರಿಕೆ ಮಡುವಂತೆ ಕೇಳಿಕೊಂಡರು. ಜಿಲ್ಲೆಯ ಇತರ ಶಾಸಕರು ಈ ನಿರ್ಣಯವನ್ನು ಬೆಂಬಲಿಸಿ ಮಾತನಾಡಿ, ಇದು ಕೇವಲ ಮಂಜೇಶ್ವರ ಕ್ಷೇತ್ರದ ಸಮಸ್ಯೆಯಲ್ಲ, ಕಾಸರಗೋಡು ಜಿಲ್ಲೆಯ ಸಾಮಾನ್ಯ ಸಮಸ್ಯೆಯಾಗಿದ್ದು, ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ರಾಷ್ಟ್ರೀಯ ಹೆದ್ದಾರಿ 66 ರ ತಲಪ್ಪಾಡಿಯಲ್ಲಿ ಪ್ರಸ್ತುತ ಟೋಲ್ ಬೂತ್ ಕಾರ್ಯಾಚರಿಸುತ್ತಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಇಲ್ಲಿ ಟೋಲ್ ಸಂಗ್ರಹಿಸುತ್ತಿದೆ. ಇಲ್ಲಿಂದ 20 ಕಿ.ಮೀ ದೂರದಲ್ಲಿ ಇನ್ನೊಂದು ಟೊಲ್‍ಬೂತ್ ಸ್ಥಾಪಿಸುವುದು ಕಾನೂನುಬಾಹಿರ. ಅನ್ಯಾಯವಾಗಿ ಟೋಲ್‍ಬೂತ್ ನಿರ್ಮಿಸಿದಲ್ಲಿ ಇದರ ವಿರುದ್ಧ ಸಾರ್ವಜನಿಕರು ಉಗ್ರ ಪ್ರತಿಭಟನೆಗಿಳಿಯಲಿದ್ದಾರೆ. ಈ ನಿರ್ಣಯವನ್ನು ರಾಜ್ಯ ಸರ್ಕಾರ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಕಳುಹಿಸಲಾಗುವುದು ಎಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ತಿಳಿಸಿದರು.
ಕಾಸರಗೋಡು ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ನೀಗಿಸುವಂತೆಯೂ ಶಾಸಕ ಎಕೆಎಂ ಅಶ್ರಫ್ ಆಗ್ರಹಿಸಿದರು. ಮಂಗಲ್ಪಾಡಿ ತಾಲೂಕು ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆಯಿಂದಾಗಿ ರಾತ್ರಿ ವೇಳೆಯ ಕಾರ್ಯಾಚರಣೆಗಳು ಅಸ್ತವ್ಯಸ್ತವಾಗುತ್ತಿವೆ ಎಂದು ತಿಳಿಸಿದರು.
ಕಾಸರಗೋಡು ಜಿಲ್ಲೆಯಲ್ಲಿ ಒಟ್ಟು 324 ವೈದ್ಯರ ಹುದ್ದೆಗಳಿದ್ದು, ಇವುಗಳಲ್ಲಿ 88 ಹುದ್ದೆಗಳು ತೆರವಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ 24 ಹುದ್ದೆಗಳು ತೆರವಾಗಲಿದೆ. ತಾತ್ಕಾಲಿಕ ನೇಮಕಾತಿಗಳನ್ನು ಪಡೆದು ಬರುವ ವೈದ್ಯರು ಉತ್ತರ ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಕೆಲಸ ಮಾಡಲು ಇಚ್ಛಿಸದಿರುವುದು ಇಲ್ಲಿ ವೈದ್ಯರ ಸಮಸ್ಯೆಗೆ ಕಾರಣವಾಗುತ್ತಿದೆ ಜಿಲ್ಲಾ ಸಹಾಯಕ ವಐದ್ಯಾಧಿಕಾರಿ ಮಾಹಿತಿ ನೀಡಿದರು.






