ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಅರಿಕ್ಕಾಡಿಯಲ್ಲಿ ಸ್ಥಾಪಿಸಲುದ್ದೇಶಿಸಿರುವ ಟೋಲ್‍ಗೇಟ್ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೈಗೊಳ್ಳುವ ತೀರ್ಮಾನದನ್ವಯ ಮುಂದುವರಿಯಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಂಸದರು, ಶಾಸಕರು ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರತಿನಿಧಿಗಳ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ಕುಂಬಳೆ ಆರಿಕ್ಕಾಡಿಯಲ್ಲಿ ಆರಂಭಿಸಿರುವ ತಾತ್ಕಾಲಿಕ ಟೋಲ್‍ಗೇಟ್ ನಿರ್ಮಣದ ಕುರಿತು ಸಾರ್ವಜನಿಕರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಸಭೆ ಆಯೋಜಿಸಲಾಗಿತ್ತು. ಟೋಲ್ ಗೇಟ್‍ಗಳನ್ನು 60 ಕಿ.ಮೀ ವ್ಯಾಪ್ತಿಗೊಂದರಂತೆ ಮಾತ್ರ ಅಳವಡಿಸಬೇಕೆಂದು ಸರ್ಕಾರದ ನಿರ್ದೇಶನದಲ್ಲಿ ತಿಳಿಸಲಾಗಿದೆ. ತಲಪ್ಪಾಡಿಯಿಂದ 20 ಕಿಲೋಮೀಟರ್ ದೂರದಲ್ಲಿರುವ ಕುಂಬಳೆ ಅರಿಕ್ಕಾಡಿಯಲ್ಲಿ ಕಾನೂನು ಉಲ್ಲಂಘಿಸಿ ಟೋಲ್ ಪ್ಲಾಜಾ ನಿರ್ಮಾಣವನ್ನು ನಿಲ್ಲಿಸಬೇಕೆಂದು ಸಂಸದರು ಮತ್ತು ಶಾಸಕರು ಒತ್ತಾಯಿಸಿದರು. ತಲಪ್ಪಾಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಟೋಲ್ ಪ್ಲಾಜಾ ಬಿಒಟಿ ಆಧಾರದಲ್ಲಿದ್ದರೆ, ಅರಿಕ್ಕಾಡಿಯಲ್ಲಿ ನಿರ್ಮಿಸಲಾಗುತ್ತಿರುವ ಟೋಲ್ ಪ್ಲಾಜಾ ಎನ್‍ಎಚ್‍ಎಐ ನಿಯಂತ್ರಣದಲ್ಲಿರುವ ತಾತ್ಕಾಲಿಕ ಟೋಲ್ ಗೇಟ್ ಆಗಿದ್ದು, ಷಟ್ಪಥ ಕಾಮಗಾರಿ ಪೂರ್ಣಗೊಂಡ ನಂತರ ಇಲ್ಲಿ ಟೋಲ್ ಸಂಗ್ರಹವನ್ನು ಸ್ಥಗಿತಗೊಳಿಸುವುದಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಣ್ಣೂರು ಯೋಜನಾ ಅನುಷ್ಠಾನ ಘಟಕದ ನಿರ್ದೇಶಕ ಉಮೇಶ್ ಕೆ. ಗರ್ಗ್ ಸಭೆಗೆ ಮಾಹಿತಿ ನೀಡಿದರು. ಪ್ರಸಕ್ತ ಪೂರ್ಣಗೊಂಡಿರುವ ರಸ್ತೆಗಳಲ್ಲಿ ಟೋಲ್ ಸಂಗ್ರಹವನ್ನು ಪ್ರಾರಂಭಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ತಿಳಿಸಿದರು.
ಆರಂಭಗೊಂಡ ಆರು ತಿಂಗಳೊಳಗೆ ಟೋಲ್‍ಗೇಟ್‍ನಲ್ಲಿ ಟೋಲ್ ಸಂಗ್ರಹ ನಿಲ್ಲಿಸುವುದರ ಜತೆಗೆ ನಿರ್ದಿಷ್ಟ ಕಿಲೋಮೀಟರ್ ವ್ಯಾಪ್ತಿಯಲ್ಲಿ ಇಂತಹ ದಿನಾಂಕದಂದು ಟೋಲ್‍ಗೇಟ್ ಮುಚ್ಚಲ್ಪಡುತ್ತದೆ ಎಂಬ ಅಂಶವನ್ನು ಎನ್‍ಎಚ್‍ಐಎ ಖಾತ್ರಿಪಡಿಸಬೇಕು. ಟೋಲ್‍ಸಂಗ್ರಹದ ಸಂದರ್ಭ ಸ್ಥಳೀಯ ನಿವಾಸಿಗಳ ಬಗ್ಗೆ ಗಮನ ಹರಿಸಬೇಕು ಮತ್ತು ಹೆಚ್ಚಿನ ಪಾದಚಾರಿ ಸೇತುವೆಗಳ ನಿರ್ಮಾಣವನ್ನು ಪರಿಗಣಿಸಬೇಕು ಎಂದು ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್, ಶಾಸಕರಾದ ಎಕೆಎಂ ಅಶ್ರಫ್, ಎನ್.ಎ ನೆಲ್ಲಿಕುನ್ನು ಮತ್ತು ಸಿ.ಎಚ್ ಕುಂಞಂಬು ಒತ್ತಾಯಿಸಿದರು. ಟೋಲ್‍ಗೇಟ್ ಸ್ಥಾಪನೆ ಬಗ್ಗೆ ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ಕೇಂದ್ರ ಸಚಿವ ನಿತಿನ್ ಗಡ್ಕರಿ ಜತೆ ಹಾಗೂ ಶಾಸಕರು ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಚರ್ಚೆ ನಡೆಸುವರು. ಅಲ್ಲಿಯವರೆಗೆ, ಟೋಲ್‍ಗೇಟ್ ನಿರ್ಮಾಣ ಕಾರ್ಯಾಚರಣೆ ನಿಲ್ಲಿಸಬೇಕು ಎಂದು ಜನಪ್ರತಿನಿಧಿಗಳು ಒತ್ತಾಯಿಸಿದರು.
ರಾಷ್ಟ್ರೀಯ ಹೆದ್ದಾರಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ಸಭೆಯಲ್ಲಿ ಈ ವಿಷಯವನ್ನು ಮಂಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಹೇಳಿದರು. ಜಿಲ್ಲಾಧಿಕಾರಿ ಕಚೇರಿ ಸಮ್ಮೇಳನ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ, ಎಡಿಎಂ ಪಿ. ಅಖಿಲ್, ಎನ್‍ಎಚ್‍ಎಐ ಉಪ ವ್ಯವಸ್ಥಾಪಕ (ಟಿ) ಜಸ್‍ಪ್ರೀತ್, ಯುಎಲ್‍ಸಿಸಿಎಸ್ ಪಿಎಂಎಂ. ನಾರಾಯಣನ್, ಎನ್‍ಎಚ್‍ಎಐ ಸಂಪರ್ಕಾಧಿಕಾರಿ ಕೆ.ಸೇತುಮಾಧವನ್, ಎನ್‍ಎಚ್‍ಎಐ ವಿಶೇಷ ತಹಸೀಲ್ದಾರ್ ಎಲ್.ಕೆ. ಸುಬೈರ್ ಮೊದಲಾದವರು ಉಪಸ್ಥಿತರಿದ್ದರು.





