ಡೆಹ್ರಾಡೂನ್: ಚಳಿಗಾಲ ಮುಗಿದ ಕಾರಣ ಚಾರ್‌ಧಾಮ್ ಯಾತ್ರಾ ಸ್ಥಳಗಳಲ್ಲಿ ಒಂದಾದ ಕೇದಾರನಾಥ ದೇಗುಲದ ಬಾಗಿಲು ಇಂದು (ಶುಕ್ರವಾರ) ತೆರೆದಿದೆ.
ಇಂದು ಬೆಳಿಗ್ಗೆ 5 ಗಂಟೆಯಿಂದ ವಿಧಿವಿಧಾನಗಳು ಆರಂಭವಾಗಿ 7 ಗಂಟೆಗೆ ದೇಗುಲ ಬಾಗಿಲು ತೆರೆದಿದೆ ಎಂದು ದೇಗುಲದ ಪ್ರಧಾನ ಅರ್ಚಕರು ತಿಳಿಸಿದ್ದಾರೆ.
ಸಮುದ್ರ ಮಟ್ಟದಿಂದ 11 ಸಾವಿರ ಅಡಿ ಎತ್ತರದಲ್ಲಿರುವ ಕೇದಾರನಾಥ ದೇಗುಲ ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯಲ್ಲಿದೆ.
ದೇಗುಲವನ್ನು 150 ಸ್ವಯಂ ಸೇವಕರು ದೇಶ, ವಿದೇಶಗಳಿಂದ ತರಿಸಲಾದ 108 ಕ್ವಿಂಟಲ್ ಹೂವುಗಳಿಂದ ಅಲಂಕರಿಸಿದ್ದಾರೆ. ದೇಗುಲವನ್ನು ಗುಲಾಬಿ, ಸೇವಂತಿಗೆ ಸೇರಿ ಒಟ್ಟು 54 ವಿವಿಧ ಹೂವುಗಳಿಂದ ಅಲಂಕರಿಸಲಾಗಿದೆ. ಭಾರತದ ವಿವಿಧ ರಾಜ್ಯಗಳಿಂದ ಮಾತ್ರವಲ್ಲದೆ ನೇಪಾಳ, ಥಾಯ್ಲೆಂಡ್ ಮತ್ತು ಶ್ರೀಲಂಕಾದಿಂದಲೂ ಹೂವುಗಳನ್ನು ತರಿಸಲಾಗಿದೆ.
ಈ ಬಾರಿ ಕೇದಾರನಾಥದಲ್ಲಿ ಹೊಸ ವೈಶಿಷ್ಟ್ಯವನ್ನು ಪರಿಚಯಿಸಲಾಗಿದೆ. ವಾರಣಾಸಿ, ಹರಿದ್ವಾರ ಮತ್ತು ಋಷಿಕೇಶದಲ್ಲಿ ನಡೆಯುವ ಗಂಗಾ ಆರತಿಯಂತೆ ದೇವಾಲಯದ ಬಳಿಯ ಮಂದಾಕಿನಿ ಮತ್ತು ಸರಸ್ವತಿ ನದಿಗಳ ಸಂಗಮದಲ್ಲಿ ಭವ್ಯವಾದ ಆರತಿಯನ್ನು ಕಲ್ಪಿಸಲಾಗಿದೆ ಎಂದು ಬಿಕೆಟಿಸಿ ಸಿಇಒ ವಿಜಯ್ ಥಾಪ್ಲಿಯಾಲ್ ಹೇಳಿದ್ದಾರೆ.
ಚಳಿಗಾಲದಲ್ಲಿ ಕೇದಾರನಾಥದಿಂದ ಶಿವನ ವಿಗ್ರಹವನ್ನು ಉಖಿಮಠದಲ್ಲಿರುವ ಓಂಕಾರೇಶ್ವರ ದೇಗುಲದಲ್ಲಿ ಇರಿಸಲಾಗುತ್ತದೆ. ಚಳಿಗಾಲದ ಅಂತ್ಯವಾದ ಮೇಲೆ ಗೌರಿಕುಂಡ್ ಹಾದಿಯಲ್ಲಿ ದೇಗುಲದ ಆಡಳಿತ ಕಮಿಟಿ ಸದಸ್ಯರು ವಿಗ್ರಹವನ್ನು ಭುಜದ ಮೇಲೆ ಹೊತ್ತು ಕೇದಾರನಾಥಕ್ಕೆ ತಂದು ಸ್ಥಾಪಿಸುತ್ತಾರೆ.
ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಸೇರಿದಂತೆ ಅನೇಕ ನಾಯಕರು ಪೂಜೆಯಲ್ಲಿ ಭಾಗವಹಿಸಿದರು.
ಕಳೆದ ವರ್ಷ 48 ಲಕ್ಷ ಯಾತ್ರಿಕರು ಚಾರ್ ಧಾಮ್ ಯಾತ್ರೆಯಲ್ಲಿ ಭಾಗಿಯಾಗಿದ್ದರೆ, ಪ್ರಸ್ತುತ ವರ್ಷ ಈ ಸಂಖ್ಯೆ 60 ಲಕ್ಷ ತಲುಪುವ ನಿರೀಕ್ಷೆಯಿದೆ ಎಂದಿದ್ದಾರೆ.

