ನವದೆಹಲಿ: ಗುಡುಗು ಸಹಿತ ಸುರಿದ ಭಾರಿ ಮಳೆಯಿಂದಾಗಿ ಶುಕ್ರವಾರ ದೆಹಲಿಯ ವಿಮಾನ ನಿಲ್ದಾಣದಲ್ಲಿ 200ಕ್ಕೂ ಹೆಚ್ಚು ವಿಮಾನಗಳ ಹಾರಾಟದಲ್ಲಿ ವ್ಯತ್ಯಯವಾಗಿದೆ. ಮೂರು ವಿಮಾನಗಳ ಮಾರ್ಗ ಬದಲಾಯಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರತಿಕೂಲ ಹವಾಮಾನವು ವಿಮಾನಗಳ ಸಂಚಾರದ ಮೇಲೆ ಪರಿಣಾಮ ಬೀರಿದೆ ಎಂದು ದೆಹಲಿ ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್ 'ಎಕ್ಸ್'ನಲ್ಲಿ ತಿಳಿಸಿದೆ.
ಮಳೆಯಿಂದಾಗಿ ವಿಮಾನ ಸಂಚಾರಕ್ಕೆ ಅಡಚಣೆಯಾಗಿದೆ. ಹಾಗಾಗಿ, ನಿಗದಿತ ವೇಳೆಗೆ ಹಾರಾಟ ನಡೆಸಲು ಸಾಧ್ಯವಾಗಿಲ್ಲ. ಇದರಿಂದ ಪ್ರಯಾಣಿಕರಿಗೆ ಆಗಿರುವ ತೊಂದರೆ ಪರಿಹರಿಸಲು ಕ್ರಮವಹಿಸಲಾಗಿದೆ. ಪರಿಸ್ಥಿತಿಯು ಸಹಜ ಸ್ಥಿತಿಗೆ ಮರಳುವ ನಿರೀಕ್ಷೆಯಿದೆ ಎಂದು ಇಂಡಿಗೊ, ಸ್ಪೈಸ್‌ಜೆಟ್ ಮತ್ತು ಏರ್ ಇಂಡಿಯಾ ವಿಮಾನಯಾನ ಕಂಪನಿಗಳು ತಿಳಿಸಿವೆ.
ಪ್ರತಿದಿನ ಈ ನಿಲ್ದಾಣದಿಂದ 1,300ಕ್ಕೂ ಹೆಚ್ಚು ವಿಮಾನಗಳು ವಿವಿಧೆಡೆಗೆ ಹಾರಾಟ ನಡೆಸುತ್ತವೆ.




