ನವದೆಹಲಿ: ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್‌ಸಿ) ಸದಸ್ಯರಾಗಿ ಅನುರಾಧಾ ಪ್ರಸಾದ್ ಅವರು ಶುಕ್ರವಾರ ಪ್ರಮಾಣವಚನ ಸ್ವೀಕರಿಸಿದರು.
ಈ ಹಿಂದೆ ಅವರು, ಗೃಹ ಸಚಿವಾಲಯದ ಅಧೀನದಲ್ಲಿರುವ ಅಂತರರಾಜ್ಯ ಕೌನ್ಸಿಲ್‌ನ ಕಾರ್ಯದರ್ಶಿಯಾಗಿ ಜವಾಬ್ದಾರಿ ನಿರ್ವಹಿಸಿದ್ದರು.
'ಆಯೋಗದ ಹಿರಿಯ ಸದಸ್ಯರಾದ ಲೆ.ಜನರಲ್(ನಿವೃತ್ತ) ರಾಜ್ ಶುಕ್ಲಾ ಅವರು ಅನುರಾಧಾ ಅವರಿಗೆ ಪ್ರಮಾಣವಚನ ಬೋಧಿಸಿದರು' ಎಂದು ಪ್ರಕಟಣೆ ತಿಳಿಸಿದೆ.
ಭಾರತೀಯ ರಕ್ಷಣಾ ಲೆಕ್ಕ ಸೇವಾ ವಿಭಾಗದ (ಐಡಿಎಎಸ್) 1986ನೇ ಬ್ಯಾಚ್‌ನ ಅಧಿಕಾರಿಯಾಗಿರುವ ಇವರು, ಕೇಂದ್ರ ಹಾಗೂ ರಾಜ್ಯಗಳು, ಅಂತರರಾಜ್ಯಗಳ ನಡುವೆ ಹಲವು ಸಂಕೀರ್ಣ ಹಾಗೂ ಸೂಕ್ಷ್ಮ ವಿಷಯಗಳನ್ನು ಸಮರ್ಥವಾಗಿ ನಿಭಾಯಿಸಿದ್ದರು. ಮೂಲಸೌಕರ್ಯ ಹಾಗೂ ಇತರೆ ಯೋಜನೆಗಳ ಜಾರಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಅನುರಾಧಾ ಅವರ ಸದಸ್ಯತ್ವದ ಅವಧಿ ಮುಂದಿನ ಆರು ವರ್ಷ ಅಥವಾ ಅವರಿಗೆ 65 ವರ್ಷ ತುಂಬುವವರೆಗೆ ಇರಲಿದೆ.




