ನವದೆಹಲಿ: 'ರೂಹ್ ಅಫ್ಜಾ' ಪಾನೀಯ ತಯಾರಿಕಾ ಕಂಪನಿ ಹಮ್‌ದರ್ದ್ ಅನ್ನು ಗುರಿಯಾಗಿಸಿ ಯಾವುದೇ ಅವಹೇಳನಕಾರಿ ಹೇಳಿಕೆ ನೀಡುವುದಾಗಲಿ ಅಥವಾ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಗಳನ್ನು ಪ್ರಕಟಿಸುವುದಾಗಲಿ ಮಾಡುವುದಿಲ್ಲ ಎಂದು ಯೋಗ ಗುರು ಬಾಬಾ ರಾಮದೇವ ಅವರು ದೆಹಲಿ ಹೈಕೋರ್ಟ್‌ನಲ್ಲಿ ಭರವಸೆ ನೀಡಿದ್ದಾರೆ.
ಹಮ್‌ದರ್ದ್ ಅನ್ನು ಗುರಿಯಾಗಿಸಿಕೊಂಡಿರುವ ನಿಂದನಾತ್ಮಕ ವಿಡಿಯೊವನ್ನು ಸಾಮಾಜಿಕ ಜಾಲತಾಲತಾಣಗಳಿಂದ 24 ಗಂಟೆಯೊಳಗೆ ತೆಗೆಯಬೇಕು ಎಂದು ಯೋಗ ಗುರು ಬಾಬಾ ರಾಮದೇವಗೆ ದೆಹಲಿ ಹೈಕೋರ್ಟ್ ಗುರುವಾರ ತಾಕೀತು ಮಾಡಿತ್ತು.
ಈ ಪಾನೀಯವನ್ನು ಉದ್ದೇಶಿಸಿ ರಾಮದೇವ ಅವರು 'ಶರಬತ್ ಜಿಹಾದ್' ಎನ್ನುವ ಮಾತು ಆಡಿರುವುದು ವಿವಾದಕ್ಕೆ ಗುರಿಯಾಗಿದೆ. ಈ ಮಾತು ನ್ಯಾಯಾಂಗ ನಿಂದನೆಯೂ ಹೌದು ಎಂದು ಆರೋಪಿಸಲಾಗಿತ್ತು.
ಹಮ್‌ದರ್ದ್ ಸೇರಿದಂತೆ ಎದುರಾಳಿ ಕಂಪನಿಗಳ ಉತ್ಪನ್ನಗಳ ಬಗ್ಗೆ ಯಾವುದೇ ಹೇಳಿಕೆ ನೀಡಬಾರದು, ವಿಡಿಯೊಗಳನ್ನು ಹಂಚಿಕೊಳ್ಳಬಾರದು ಎಂದು ರಾಮದೇವ ಅವರಿಗೆ ಕೋರ್ಟ್ ಈ ಹಿಂದೆಯೇ ಸೂಚನೆ ನೀಡಿತ್ತು. ಆದರೆ, ರಾಮದೇವ ಅವರು ತನ್ನ ಉತ್ಪನ್ನವನ್ನು ಅವಹೇಳನ ಮಾಡಿದ ವಿಡಿಯೊವನ್ನು ಮತ್ತೆ ಹಂಚಿಕೊಂಡಿದ್ದಾರೆ ಎಂದು ಹಮ್‌ದರ್ದ್ ಪರ ವಕೀಲರು ನ್ಯಾಯಾಲಯಕ್ಕೆ ಗುರುವಾರ ತಿಳಿಸಿದ್ದರು.
ಇದನ್ನು ಆಲಿಸಿದ ನ್ಯಾಯಾಲಯವು, ಹಮ್‌ದರ್ದ್ ಉತ್ಪನ್ನಗಳ ಬಗ್ಗೆ ಉಲ್ಲೇಖವಿರುವ ವಿಡಿಯೊವನ್ನು 24 ಗಂಟೆಗಳಲ್ಲಿ ತೆಗೆದುಹಾಕಬೇಕು ಎಂದು ರಾಮದೇವ ಅವರಿಗೆ ತಾಕೀತು ಮಾಡಿತ್ತು.
'ಹಿಂದಿನ ಆದೇಶದ ಹಿನ್ನೆಲೆಯಲ್ಲಿ ಗಮನಿಸಿದಾಗ, ನೀವು ಸಲ್ಲಿಸಿರುವ ಪ್ರಮಾಣಪತ್ರ ಹಾಗೂ ವಿಡಿಯೊ ನ್ಯಾಯಾಂಗ ನಿಂದನೆಯಂತೆ ಇದೆ ಎಂಬುದು ಮೇಲ್ನೋಟಕ್ಕೆ ಅನ್ನಿಸುತ್ತಿದೆ. ನಾನು ಈಗ ನ್ಯಾಯಾಂಗ ನಿಂದನೆ ನೋಟಿಸ್ ಹೊರಡಿಸಲಿದ್ದೇನೆ. ನಾವು ಅವರನ್ನು ಇಲ್ಲಿಗೆ ಬರಹೇಳಲಿದ್ದೇವೆ' ಎಂದು ನ್ಯಾಯಮೂರ್ತಿ ಅಮಿತ್ ಬನ್ಸಲ್ ಹೇಳಿದ್ದರು.
ವಿವಾದಾತ್ಮಕ ಹೇಳಿಕೆಯ ಕಾರಣಕ್ಕಾಗಿ ಹಮ್‌ದರ್ದ್ ನ್ಯಾಷನಲ್ ಫೌಂಡೇಷನ್ ಇಂಡಿಯಾ ಸಂಸ್ಥೆಯು ರಾಮದೇವ ಮತ್ತು ಅವರ ಪತಂಜಲಿ ಫುಡ್ಸ್ ಲಿಮಿಟೆಡ್ ಕಂಪನಿಯ ವಿರುದ್ಧ ಅರ್ಜಿ ಸಲ್ಲಿಸಿದೆ.




