ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ನಡೆಯುತ್ತಿರುವ ಕಾಸರಗೋಡು ಜಿಲ್ಲೆಯಲ್ಲಿ ಸಾಕಷ್ಟು ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ಖಚಿತಪಡಿಸಿಕೊಳ್ಳಲು ತಕ್ಷಣ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಅರಣ್ಯ, ವನ್ಯಜೀವಿ ಖಾತೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎ.ಕೆ. ಶಶೀಂದ್ರನ್ ಹೇಳಿದರು. ಮುಂದಿನ ಎರಡು ದಿನಗಳಲ್ಲಿ ಇದಕ್ಕೆ ಬೇಕಾದ ಅಗತ್ಯ ಕ್ರಮ ಕೈಗೊಳ್ಳಬೇಕು.
ಅವರು ಜಿಲ್ಲೆಯಲ್ಲಿ ಮಳೆಗಾಲದ ಹಾನಿಯನ್ನು ನಿಭಾಯಿಸಲು ತೆಗೆದುಕೊಂಡ ಕ್ರಮಗಳ ಪರಿಶೀಲನೆಗಾಗಿ ಕಾಸರಗೋಡು ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಾಗರಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ನಿರ್ಮಾಣ ಗುತ್ತಿಗೆ ಕಂಪನಿಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿದೆ. ಎರಡನೇ ಮತ್ತು ಮೂರನೇ ರೀಚ್‍ಗಳ ನಿರ್ಮಾಣದ ಜವಾಬ್ದಾರಿ ಹೊಂದಿರುವ ಕಂಪನಿಯು ಮೇ 27ರಂದು ತುರ್ತು ಕೆಲಸವನ್ನು ಪೂರ್ಣಗೊಳಿಸಬೇಕಾಗಿದೆ. ನಿರ್ಮಾಣ ಪ್ರದೇಶದಲ್ಲಿ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವುದರ ಜತೆಗೆ ನೀರಿನ ಹರಿವು ಮತ್ತು ಭೂಕುಸಿತವನ್ನು ತಡೆಗಟ್ಟಲು ತೆಗೆದುಕೊಳ್ಳುತ್ತಿರುವ ತಕ್ಷಣದ ಕ್ರಮಗಳ ಕುರಿತು ಸಮಗ್ರ ವರದಿಯನ್ನು ಸಲ್ಲಿಸುವಂತೆ ಸಚಿವರು ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದರು.
ಈ ಬಗೆಗಿನ ವರದಿಯನ್ನು 27ರಂದು ಬೆಳಿಗ್ಗೆ 11ಕ್ಕೆ ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ತನಗೆ ಸಲ್ಲಿಸಲಿದ್ದು, ವರದಿಯನ್ನು ಮೌಲ್ಯಮಾಪನ ಮಾಡಿ ಮುಖ್ಯಮಂತ್ರಿಗೆ ಕಳುಹಿಸಲಾಗುವುದು. ಈ ಮಾಹಿತಿಯನ್ನು ಕೇಂದ್ರ ಭೂ ಸಾರಿಗೆ ಇಲಾಖೆಯೊಂದಿಗೆ ಹಂಚಿಕೊಳ್ಳಲಾಗುವುದು ಎಂದು ಸಚಿವರು ಹೇಳಿದರು. ನಿರ್ಮಾಣ ಗುತ್ತಿಗೆ ಕಂಪನಿಯು ನಿರ್ಲಕ್ಷ್ಯ ಧೋರಣೆ ಮುಂದುವರಿಸಿದರೆ ಕಠಿಣ ಕ್ರಮ ಕೈಗೊಳ್ಳಬೇಕಾಗುವುದು ಎಂದು ಸಚಿವರು ಎಚ್ಚರಿಸಿದರು.
ಮಳೆಗಾಲ ಬಿರುಸುಪಡೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾರ್ಯ ನಡೆಯುತ್ತಿರುವ ಪ್ರದೇಶಗಳಲ್ಲಿ ಸಾಕಷ್ಟು ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲು ತುರ್ತಾಗಿ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ ಎಂದು ಶಾಸಕ ಎಂ. ರಾಜಗೋಪಾಲನ್ ಹೇಳಿದರು. ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಲೋಪ ಸರಿಪಡಿಸಿಕೊಳ್ಳುವುದರ ಜತೆಗೆ ಸನುದ್ರಕೊರೆತ ತಡೆಗಟ್ಟಲೂ ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಸದ ರಆಜ್‍ಮೋಹನ್ ಉಣ್ಣಿತ್ತಾನ್ ಆಗ್ರಹಿಸಿದರು.
ಮಳೆಗಾಲದ ಸಿದ್ಧತೆಗಳನ್ನು ಪರಿಶೀಲಿಸಲು ಸ್ಥಳೀಯಾಡಳಿತ ಸಂಸ್ಥೆಗಳ ಅಧ್ಯಕ್ಷರು, ಕಾರ್ಯದರ್ಶಿಗಳು, ಕಂದಾಯ ಅಧಿಕಾರಿಗಳು ಮತ್ತು ವಿವಿಧ ಇಲಾಖೆಗಳ ಮುಖ್ಯಸ್ಥರ ಸಭೆ ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.




