ತಿರುವನಂತಪುರ: ಕೇರಳದ ಪದ್ಮನಾಭಸ್ವಾಮಿ ದೇಗುಲದಲ್ಲಿ ನಾಪತ್ತೆಯಾಗಿದ್ದ 103 ಗ್ರಾಂ ಚಿನ್ನ ದೇಗುಲದ ಆವರಣದಲ್ಲೇ ಪತ್ತೆಯಾಗಿದೆ.
ದೇಗುಲದ ನೆಲಮಹಡಿಯ ರಹಸ್ಯ ಕೋಣೆಗಳಲ್ಲಿ ಬೆಲೆ ಕಟ್ಟಲಾಗದ ಅಪಾರ ಚಿನ್ನಾಭರಣ ಇದೆ ಎಂಬ ಮಾಹಿತಿ ನಂತರ ಬಿಗಿ ಭದ್ರತೆ ಕಲ್ಪಿಸಿದ್ದರೂ ಚಿನ್ನ ನಾಪತ್ತೆ ಭಾರಿ ಅನುಮಾನ ಮೂಡಿಸಿತ್ತು.
'ದೇಗುಲದ ಗರ್ಭಗುಡಿಗೆ ಸ್ವರ್ಣ ಲೇಪನ ಮಾಡಲು ಈ ಚಿನ್ನವನ್ನು ಬಳಕೆ ಮಾಡಲಾಗುತ್ತಿತ್ತು. ದೇಗುಲದ ಭದ್ರತಾ ಕೊಠಡಿಯಿಂದ ಚಿನ್ನವನ್ನು ತಗೆದುಕೊಂಡಿದ್ದೆವು. ಇದರಲ್ಲಿ 103 ಗ್ರಾಂ ಚಿನ್ನ ಶನಿವಾರ ತೂಗುವಾಗ ಕಡಿಮೆ ಬಂದಿದೆ' ಎಂದು ದೇಗುಲದ ಸಿಬ್ಬಂದಿ ಪೊಲೀಸರಿಗೆ ತಿಳಿಸಿದ್ದರು.
ಶನಿವಾರ ಇಡೀ ದೇಗುಲ ಹುಡುಕಿದ್ದರೂ ಚಿನ್ನ ಸಿಕ್ಕಿರಲಿಲ್ಲ. ಪೊಲೀಸರು, ಬಾಂಬ್ ಪತ್ತೆ ದಳದ ಸಿಬ್ಬಂದಿ ಶೋಧ ಆರಂಭಿಸಿದ್ದರು. ಈ ಮಧ್ಯೆ ದೇಗುಲ ಆವರಣದ ಮರಳಿನ ಮೇಲೆ ಭಾನುವಾರ ಚಿನ್ನ ಪತ್ತೆಯಾಗಿದೆ.
ಭಾರಿ ಭದ್ರತೆ ನಡುವೆಯೂ ಗರ್ಭಗುಡಿ ಸ್ಥಳದಿಂದ ಚಿನ್ನ ಬೇರೆ ಸ್ಥಳಕ್ಕೆ ಹೋಗಿದ್ದು ಹೇಗೆ ಎಂಬುದು ಇನ್ನೂ ನಿಗೂಢವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.




