ಕಾಸರಗೋಡು: ವಿಕಸಿತ ಕೃಷಿ ಸಂಕಲ್ಪ ಅಭಿಯಾನ(ವಿಕೆಎಸ್‍ಎ)ಕಾಞಂಗಾಡಿನ ಅಜನೂರ್‍ನಲ್ಲಿ ಜರುಗಿತು. ಅಭಿಯಾನದ ಅಂಗವಾಗಿ ಕ್ರಷಿಕರು ಮತ್ತು ವಿಜ್ಞಾನಿಗಳ ಮಧ್ಯೆ ಸಂವಾದ ಕಾರ್ಯಕ್ರಮ ನಡೆಯಿತು.
ಕಾಞಂಗಡು ಶಾಸಕ ಇ. ಚಂದ್ರಶೇಖರನ್ ಸಮಾರಂಭ ಉದ್ಘಾಟಿಸಿ ಮಾತನಾಡಿ, ಆಧುನಿಕ ಕೃಷಿ ತಂತ್ರಜ್ಞಾನಗಳ ತಳಮಟ್ಟದ ಪ್ರಸರಣ ಅತೀ ಅಗತ್ಯವಾಗಿದೆ. ಆಧುನಿಕ ಕೃಷಿ ವಿಧಾನ ಹಾಗೂ ವೈಜ್ಞಾನಿಕ ಬೆಳವಣಿಗೆ ಸಣ್ಣ ಮತ್ತು ಅತಿ ಸಣ್ಣ ರೈತರನ್ನು ತಲುಪುವಂತಾಗಬೇಕು. ಕೃಷಿಯಲ್ಲಿನ ಆವಿಷ್ಕಾರ ಹಾಗೂ ಹೊಸ ತಂತ್ರಜ್ಞಾನದ ಬಳಕೆ ಮೂಲಕ ಆಧುನಿಕತೆಯನ್ನು ಕೃಷಿಯಲ್ಲಿ ಅಳವಡಿಸಿಕೊಲ್ಳಬೇಕಾದ ಅನಿವಾರ್ಯತೆಯಿದೆ ಎಂದು ತಿಳಿಸಿದರು.
ಐಸಿಎಆರ್-ಸಿಪಿಸಿಆರ್‍ಐ ನಿರ್ದೇಶಕ ಡಾ. ಕೆ. ಬಿ. ಹೆಬ್ಬಾರ್ ತಮ್ಮ ಮುಖ್ಯ ಭಾಷಣ ಮಾಡಿ, ಸಂಶೋಧನೆ ಮತ್ತು ಕ್ಷೇತ್ರ ಮಟ್ಟದ ವಾಸ್ತವದ ನಡುವಿನ ಅಂತರವನ್ನು ಕಡಿಮೆ ಮಾಡುವಲ್ಲಿ ಅಭಿಯಾನದ ಮಹತ್ವವನ್ನು ವಿವರಿಸಿದರು. ಅಜನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಟಿ. ಶೋಭಾ ಅದ್ಯಕ್ಷತೆ ವಹಿಸಿದ್ದರು. ನೈಸರ್ಗಿಕ ಕೃಷಿ, ಐಸಿಟಿ ಆಧಾರಿತ ಸ್ಮಾರ್ಟ್ ಕೃಷಿ ಮತ್ತು ಸಮಗ್ರ ಬೆಳೆ-ಜಾನುವಾರು ವ್ಯವಸ್ಥೆಗಳು ಸೇರಿದಂತೆ ವಿಕೆಎಸ್‍ಎ ವಿಷಯಗಳ ಕುರಿತು ಕೃಷಿಕರ ಭಾಗವಹಿಸುವಿಕೆಯನ್ನು ಖಾತ್ರಿಪಡಿಸಲು ಮತ್ತು ಜಾಗೃತಿ ಮೂಡಿಸಲು ಸಾಂಕೇತಿಕ ಪಾದಯಾತ್ರೆಯನ್ನು ಆಯೋಜಿಸಲಾಗಿತ್ತು.
ಡಾ. ಮುಹಮ್ಮದ್ ಅಜರುದ್ದೀನ್, ಡಾ. ಸುರೇಶ್ ಬಾಬು ಪಿ.ಪಿ, ಡಾ. ರಮೇಶ್ ವಿ. ಮತ್ತು ಡಾ. ರೇಣುಕಾ ವಿ ಸೇರಿದಂತೆ ತಜ್ಞರು ಬೆಳೆ ವೈವಿಧ್ಯೀಕರಣ, ಮೀನುಗಾರಿಕೆ ಮತ್ತು ಸುಸ್ಥಿರ ಕೃಷಿ ಮಾದರಿಗಳ ಕುರಿತು ಸಂವಾದ ನಡೆಸಿಕೊಟ್ಟರು. ಡಾ. ಬೆಂಜಮಿನ್ ಮ್ಯಾಥ್ಯೂ ಮೋಡರೇಟರ್ ಆಗಿದ್ದರು. ಡಾ. ಮನೋಜ್‍ಕುಮಾರ್ ಟಿ.ಎಸ್. ಸಂವಾದಕ್ಕೆ ಸಕ್ರಿಯವಾಗಿ ಕೊಡುಗೆ ನೀಡಿದರು. ವಿಷಯ ತಜ್ಞರಾದ ಡಾ. ಸರಿತಾ ಹೆಗ್ಡೆ, ಕಿರಣ್‍ಮೋಯ್ ಪಾತ್ರ ಮತ್ತು ದಿನೇಶ್ ಕುಮಾರ್ ಯಾದವ್ ರೈತರ ಪ್ರಶ್ನೆಗಳಿಗೆ ಉತ್ತರಿಸಿದರು. ಈ ಸಂದರ್ಭ ಬೀಜಗಳು, ಕರಪತ್ರಗಳು ಮತ್ತು ಬೆಳೆ ಸಲಹಾ ಕಿಟ್‍ಗಳನ್ನು ವಿತರಿಸಿದರು.
ಕೆವಿಕೆ-ಕಾಸರಗೋಡಿನ ಮುಖ್ಯಸ್ಥ ಮತ್ತು ಕಾರ್ಯಕ್ರಮ ಸಂಯೋಜಕ ಡಾ. ಮನೋಜ್‍ಕುಮಾರ್ ಟಿ.ಎಸ್. ಸ್ವಾಗತಿಸಿದರು.ಪಳ್ಳಿಕೆರೆ ಪಂಚಾಯಿತಿ ಕೃಷಿ ಅಧಿಕಾರಿ ಸಂತೋಷ್ ಕುಮಾರ್ ವಂದಿಸಿದರು. ಕಾರ್ಯಕ್ರಮದಲ್ಲಿ ಸುಮಾರು 75 ರೈತರು ಮತ್ತು ಅಭಿವೃದ್ಧಿ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.





