ಕಾಸರಗೋಡು: ಕಾಞಂಗಾಡು-ಕಾಸರಗೋಡು ರಾಜ್ಯ ಹೆದ್ದಾರಿಯ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಲಾಗಿದ್ದು, ಕಾಮಗಾರಿ ಬಿರುಸಿನಿಂದ ಸಾಗುತ್ತಿದೆ. ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಕೆ. ಇಂಪಶೇಖರ್ ಹೊರಡಿಸಿದ ಆದೇಶದನ್ವಯ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಗುತ್ತಿಗೆದಾರ ಕಂಪನಿಯ ಸಹಯೋಗದೊಂದಿಗೆ ಕಾಮಗಾರಿ ನಡೆಸಲಾಗುತ್ತಿದೆ.
ರಾಷ್ಟ್ರೀಯ ಹೆದ್ದಾರಿ66ರಲ್ಲಿ ಕಾಸರಗೋಡು-ಚೆರ್ಕಳ-ಚಟ್ಟಂಚಾಲ್ ಪ್ರದೇಶದಲ್ಲಿ ಅಭಿವೃದ್ಧಿ ಕಾಮಗಾರಿ ನಡೆದುಬರುತ್ತಿದ್ದು, ತುರ್ತು ಸಂದರ್ಭಗಳಲ್ಲಿ ವಾಹನ ಸಂಚಾರವನ್ನು ಕಾಸರಗೋಡಿನಿಂದ ಚಂದ್ರಗಿರಿ ಹಾದಿಯಾಗಿ ಕಾಸರಗೋಡು-ಕಾಞಂಗಾಡು ರಾಜ್ಯ ಹೆದ್ದಾರಿ ಮೂಲಕ ಸಂಚರಿಸಲು ಅನುಕೂಲವಾಗುವ ನಿಟ್ಟಿನಲ್ಲಿ ರಾಜ್ಯಹೆದ್ದಾರಿ ದುರಸ್ತಿಕಾಮಗಾರಿ ನಡೆಸಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಂಡಲ್ಲಿ ತುರ್ತಾಗಿ ಕಾಸರಗೋಡು-ಮೇಲ್ಪರಂಬ ಹಾದಿಯಾಗಿ ವಾಹನಗಳನ್ನು ಕಾಞಂಗಾಡು ರಾಜ್ಯ ಹೆದ್ದಾರಿ ಮೂಲಕ ಕಳುಹಿಸಿಕೊಡಲಾಗುತ್ತಿದೆ.






