ಕಾಸರಗೋಡು: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಕಾಸರಗೋಡು ಸೇರಿದಂತೆ ಕೇರಳಾದ್ಯಂತ ಭಾರೀ ಮಳೆಯಾಗುತ್ತಿದ್ದು, ಜಿಲ್ಲೆಯಲ್ಲಿ ಹೆಚ್ಚಿನ ನಾಶನಷ್ಟಕ್ಕೆ ಕಾರಣವಾಗಿದೆ. ಇತಿಹಾಸಪ್ರಸಿದ್ಧ ಮಧೂರು ಶ್ರೀ ಮದನಂತೇಶ್ವರ ದೇವಸ್ಥಾನ ಸನಿಹದ ಮಧುವಾಹಿನಿ ಹೊಳೆ ಅಪಾಯಮಟ್ಟಮೀರಿ ಹರಿಯುತ್ತಿದ್ದು, ದೇವಾಲಯದ ಗರ್ಭಗುಡಿ ವರೆಗೂ ನೆರೆನೀರು ತುಂಬಿಕೊಂಡಿದೆ. ಬಿರುಸಿನ ಮಳೆಯ ಬಗ್ಗೆ ಮಾಹಿತಿಯಿಲ್ಲದೆ, ದೇವಸ್ಥಾನ ತಲುಪಿದ್ದ ಭಕ್ತಾದಿಗಳು ಮಹಾದ್ವಾರದ ಬಳಿ ಶ್ರೀದೇವರಿಗೆ ಪ್ರಾರ್ಥನೆ ಸಲ್ಲಿಸಿ ವಾಪಸಾಗಿದ್ದರು. ದೇವಸ್ಥಾನ ಸಿಬ್ಬಂದಿ ಸೊಂಟದ ವರೆಗಿನ ನೀರಿನಲ್ಲಿ ಸಾಗಿ ದೇವಾಲಯದ ದೈನಂದಿನ ಕಾರ್ಯ ನಿರ್ವಹಿಸಿದರು. 25ಕೋಟಿಗೂ ಹೆಚ್ಚು ಮೊತ್ತ ಬಳಸಿ ದೇವಾಲಯದ ಜೀರ್ಣೋದ್ಧಾರ ಕಾರ್ಯಕೈಗೊಂಡು ಇತ್ತೀಚೆಗಷ್ಟೆ ಬ್ರಹ್ಮಕಲಶೋತ್ಸವ ನಡೆಸಲಾಗಿದ್ದರೂ, ದೇವಾಲಯದೊಳಗೆ ಭಾರಿ ಪ್ರಮಾಣದಲ್ಲಿ ನೆರೆನೀರು ನುಗ್ಗುವುದನ್ನು ತಡೆಗಟ್ಟಲು ಸೂಕ್ತ ಯೋಜನೆ ತಯಾರಿಸದಿರುವ ಬಗ್ಗೆ ಭಕ್ತಾದಿಗಳು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಗುರುವಾರ ರಾತ್ರಿಯಿಂದ ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿದ್ದು, ಹೊಳೆ, ತೋಡುಗಳು ತುಂಬಿ ಹರಿಯುತ್ತಿದೆ. ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಿದ್ದ ಹಿನ್ನೆಲೆಯಲ್ಲಿ ಅಂಗನವಾಡಿ, ಮದ್ರಸಾ ಸೇರಿದಂತೆ ಶಿಕ್ಷಣ ಸಂಸ್ಥೆಗಳಿಗೆ ಜಿಲ್ಲಾಧಿಕಾರಿ ರಜೆ ಸಾರಿದ್ದರು.
ಮಹಿಳೆ ನೀರುಪಾಲು:
ಮಲ್ಲ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಸನಿಹದ ಮಧುವಾಹಿನಿ ಹೊಳೆಗೆ ಬಿದ್ದು, ಮಹಿಳೆ ಮೃತಪಟ್ಟಿದ್ದಾರೆ. ಮಲ್ಲ ಸೇತುವೆ ಸನಿಹದ ದುರ್ಗಾಂಬಾ ನಿಲಯದ ದಿ. ಎಂ. ನಾರಾಯಣ ಮಣಿಯಾಣಿ ಅವರ ಪತ್ನಿ, ಎಂ. ಗೋಪಿ(75)ಮೃತಪಟ್ಟವರು. ಗುರುವಾರ ಬಟ್ಟೆ ತೊಳೆಯಲು ತೆರಳಿದ್ದ ಸಂದರ್ಭ ಇವರು ನೀರುಪಲಾಗಿದ್ದು, ಮನೆಗೆ ವಾಪಸಾಗದ ಹಿನ್ನೆಲೆಯಲ್ಲಿ ಹುಡುಕಾಡುವ ಮಧ್ಯೆ, ಇಲ್ಲಿಂದ ಮೂರು ಕಿ.ಮೀ ದೂರದ ಮುಂಡಪಳ್ಳ ಕಟ್ಟದದಲ್ಲಿ ಮೃತದೇಹ ಪತ್ತೆಯಾಗಿತ್ತು. ಆದೂರು ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಜಿಲ್ಲೆಯ ಮೊಗ್ರಾಲ್ ಹೊಳೆ, ನೀಲೇಶ್ವರ, ಉಪ್ಪಳ, ಹೊಸಂಗಡಿ, ಮಂಜೇಶ್ವರ ಹೊಳೆಗಳು ಅಪಾಯಮಟ್ಟ ಮೀರಿ ಹರಿಯುತ್ತಿದೆ.
ರಸ್ತೆಯಲ್ಲಿ ಬಿರುಕು, ಹಾನಿ:
ಚಂದ್ರಗಿರಿ ರಸ್ತೆಯ ಪಿಲಿಕುಂಜೆ ಬಳಿ ಕೆಎಸ್‍ಟಿಪಿ ರಸ್ತೆ ಸನಿಹದ ಗುಡ್ಡ ಕುಸಿದಿದ್ದು, ಸನಿಹದ ಎನ್‍ಜಿಓ ಹೋಮ್‍ನಲ್ಲಿ ವಾಸಿಸುತ್ತಿದ್ದ 20ಮಂದಿ ಸರ್ಕಾರಿ ಉದ್ಯೋಗಿಗಳನ್ನು ಸನಿಹದ ನುಳ್ಳಿಪ್ಪಾಡಿಯ ಸರ್ಕಾರಿ ಯುಪಿ ಶಾಲೆ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು. ಚೆರ್ಕಳ ಸನಿಹ ಕುಂಡಡ್ಕದಲ್ಲಿ ಷಟ್ಪಥ ಕಾಮಗಾರಿ ನಡೆಯುತ್ತಿರುವ ಹೆದ್ದಾರಿಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಆಸುಪಾಸಿನ 20ಕ್ಕೂ ಹೆಚ್ಚುಮನೆಗಳಲ್ಲಿ ವಾಸಿಸುತ್ತಿರುವವರಲ್ಲಿ ಆತಂಕ ಮನೆಮಾಡಿದೆ. ಸಥಳಕ್ಕೆ ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್, ಇತರ ಕಂದಾಯಾಧಿಕರಿಗಳು, ಪೊಲೀಸರು ಭೇಟಿ ನೀಡಿದರು. ಪೆರಿಯ ಸನಿಹದ ಪೆರಿಯಾಟಡ್ಕ ಹೆದ್ದಾರಿಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಚೆರ್ಕಳ, ಚಟ್ಟಂಚಲಿನಲ್ಲೂ ಷಟ್ಪಥ ಕಾಮಗಾರಿ ನಡೆಯುತ್ತಿರುವ ಪ್ರದೇಶದಲ್ಲಿ ಭಾರಿ ಪ್ರಮಾಣದಲ್ಲಿ ಭೂಕುಸಿತವುಂಟಾಗುತ್ತಿದ್ದು, ಈ ಹಾದಿಯಾಗಿ ಬಸ್ ಸೇರಿದಂತೆ ಘನವಾಹನ ಸಂಚಾರಕ್ಕೆ ನಿಯಂತ್ರಣ ಹೇರಲಾಗಿದೆ. ಈ ಹಾದಿಯಾಗಿ ಸಾಗಬೇಕಾದ ವಾಹನಗಳನ್ನು ಬೇರೊಂದು ರೂಟಿನ ಮೂಲಕ ಕಳಹುಹಿಸಿಕೊಡಲಾಗುತ್ತಿದೆ.
ಬಿರುಸಿನ ಮಳೆಗೆ ಮಧೂರು ಪಟ್ಲದಲ್ಲಿ ಯುವಕ ನೀರಿಗೆ ಬಿದ್ದು ಮೃತಪಟ್ಟಿದ್ದಾನೆ. ಪಾಲಕುನ್ನು ಕೋಟಿಕುಳಂ ರೈಲ್ವೆ ನಿಲ್ದಾಣ ರಸ್ತೆಯಲ್ಲಿ ಬಟ್ಟೆ ಅಂಗಡಿ ನಡೆಸುತ್ತಿರುವ ಪಾಲಕುನ್ನು ಕರಿಪ್ಪೊಡಿ ನಿವಾಸಿ ಅಜೀಜ್-ಆಸ್ಮಾ ದಂಪತಿ ಪುತ್ರ ಸಾದಿಕ್(39)ಮೃತಪಟ್ಟ ಯುವಕ. ಪಟ್ಲದಲ್ಲಿರುವ ಪತ್ನಿ ಮನೆಗೆ ಆಗಮಿಸಿದ್ದ ಇವರು, ಶುಕ್ರವಾರ ಬೆಳಗ್ಗೆ ಪತ್ನಿ ಸಹೋದರನ ಜತೆ ಪಟ್ಲದಲ್ಲಿ ನಡೆದುಹೋಗುತ್ತಿರುವ ಮಧ್ಯೆ ಆಯತಪ್ಪಿ ತೋಡಿಗೆ ಬಿದ್ದ ಇವರು ನೀರುಪಾಲಾಗಿದ್ದರು. ತಕ್ಷಣ ಸ್ಥಳೀಯರ ಸಹಾಐದಿಂದ ಅಗ್ನಿಶಾಮಕ ದಳ ನೆರವಿನಿಂದ ಸಾದಿಕ್ ಅವರನ್ನು ನೀರಿನಿಂದ ಮೇಲಕ್ಕೆತ್ತಿ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ. ದುಬೈಯಲ್ಲಿ ಅಂಗಡಿಯೊಂದರಲ್ಲಿ ಕ್ಯಾಶಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಇವರು, ಒಂದು ತಿಂಗಳ ಹಿಂದೆಯಷ್ಟೆ ಊರಿಗೆ ಆಗಮಿಸಿದ್ದರು.







