ಮಾಸ್ಕೊ: ಪಾಶ್ಚಿಮಾತ್ಯ ದೇಶಗಳು ಭಾರತ ಮತ್ತು ಚೀನಾವನ್ನು ಪರಸ್ಪರ ಎತ್ತಿ ಕಟ್ಟುವ ಕೆಲಸ ಮಾಡುತ್ತಿವೆ ಎಂದು ರಷ್ಯಾದ ವಿದೇಶಾಂಗ ವ್ಯವಹಾರಗಳ ಸಚಿವ ಸೆರ್ಗೆ ಲಾವ್ರೋವ್ ಶುಕ್ರವಾರ ಹೇಳಿದ್ದಾರೆ.
ಇಲ್ಲಿನ ವಿದೇಶಾಂಗ ಇಲಾಖೆ ಆಯೋಜಿಸಿದ್ದ 'ಅಭಿವೃದ್ಧಿ ಮತ್ತು ಸಾಂಸ್ಕೃತಿಕ ರಾಜತಾಂತ್ರಿಕತೆ' ಎಂಬ ವಿಷಯದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಚೀನಾವನ್ನು ಗುರಿಯಾಗಿಸಲು ಇಂಡೊ-ಪೆಸಿಫಿಕ್ ನೀತಿ ರೂಪಿಸಿ, ಭಾರತ ಮತ್ತು ಚೀನಾವನ್ನು ಎತ್ತಿಕಟ್ಟುವ ತಂತ್ರವನ್ನು ಪಶ್ಚಿಮ ರಾಷ್ಟ್ರಗಳು ಮಾಡುತ್ತಿವೆ ಎಂದು ಅವರು ಗಂಭೀರ ಆರೋಪ ಮಾಡಿದರು.
ಈ ಪಶ್ಚಿಮ ದೇಶಗಳು ಆಸಿಯಾನ್ ಒಕ್ಕೂಟವನ್ನು ದುರ್ಬಲಗೊಳಿಸಲು ನಿರಂತರವಾಗಿ ಪ್ರಯತ್ನ ಮಾಡುತ್ತಿವೆ ಎಂದು ಆರೋಪ ಮಾಡಿದರು.
ಆಫ್ರಿಕಾದಲ್ಲಿ ಎಲ್ಲಾ ದೇಶಗಳನ್ನು ಒಳಗೊಂಡಂತೆ ಪ್ರಾದೇಶಿಕ ಒಕ್ಕೂಟಗಳು ಜೊತೆಯಾಗಿವೆ. ಹಾಗೇ ಲ್ಯಾಟಿನ್ ಅಮೆರಿಕ ಮತ್ತು ಕೆರಿಬಿಯನ್‌ನಲ್ಲಿ ಇಂತಹ ಒಕ್ಕೂಟಗಳು ಚಾಲ್ತಿಯಲ್ಲಿವೆ. ಆದರೆ ಯುರೇಷಿಯಾ (ಯುರೋಪ್-ಏಷ್ಯಾ ಖಂಡ)ದಲ್ಲಿ ಇದುವರೆಗೂ ಅಂತಹ ಯಾವುದೇ ಸಾಮೂಹಿಕ ಸಂಘಟನೆ ರಚನೆಯಾಗಿಲ್ಲ ಎಂದು ಅವರು ಹೇಳಿದರು.






