ಇಸ್ತಾಂಬುಲ್: ಟರ್ಕಿಯ ಮಧ್ಯಸ್ಥಿಕೆಯಲ್ಲಿ ಶುಕ್ರವಾರ ನಡೆದ ಶಾಂತಿ ಮಾತುಕತೆ ವೇಳೆ ರಷ್ಯಾ ಮತ್ತು ಉಕ್ರೇನ್ ತಲಾ ಒಂದು ಸಾವಿರ ಯುದ್ಧ ಕೈದಿಗಳನ್ನು ವಿನಿಮಯ ಮಾಡಿಕೊಳ್ಳಲು ಒಪ್ಪಿದವು. ಆದರೆ, ಕದನ ವಿರಾಮ ಸಂಬಂಧ ಒಪ್ಪಂದಕ್ಕೆ ಬರುವಲ್ಲಿ ಉಭಯ ರಾಷ್ಟ್ರಗಳು ವಿಫಲವಾದವು.
ಯುದ್ಧ ಕೊನೆಗೊಳಿಸುವ ದಿಸೆಯಲ್ಲಿ 2022ರ ನಂತರ ಮೊದಲ ಮಾತುಕತೆ ಇಸ್ತಾಂಬುಲ್‌ನಲ್ಲಿ ನಡೆಯಿತು. ಬಹುನಿರೀಕ್ಷಿತ ಮಾತುಕತೆ ಮುಗಿದಾಗ, ಮೂರು ವರ್ಷಗಳ ಯುದ್ಧವನ್ನು ಕೊನೆಗೊಳಿಸುವ ವಿಷಯದಲ್ಲಿ ಮಹತ್ವದ ಬೆಳವಣಿಗೆ ಸಾಧಿಸಿರುವ ಕೆಲ ಲಕ್ಷಣಗಳು ಕಂಡುಬಂದಿವೆ.
ಸಂಭವನೀಯ ಕದನ ವಿರಾಮದ ಬಗ್ಗೆ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳುವುದಾಗಿ, ನೇರ ಮಾತುಕತೆಗೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ನಡುವಿನ ಸಂಭವನೀಯ ಭೇಟಿಯ ಬಗ್ಗೆಯೂ ಉಭಯ ರಾಷ್ಟ್ರಗಳ ನಿಯೋಗದ ಪ್ರತಿನಿಧಿಗಳು ಚರ್ಚಿಸಿದರು.
ಉಕ್ರೇನ್‌ನ ದೊಡ್ಡ ಭೂಭಾಗವನ್ನು ನಾಶಪಡಿಸಿದ ಮತ್ತು ಲಕ್ಷಾಂತರ ಜನರು ನೆಲೆ ಕಳೆದುಕೊಳ್ಳಲು ಕಾರಣವಾದ ಈ ಸಂಘರ್ಷವನ್ನು ನಿಲ್ಲಿಸಲು ಉಕ್ರೇನ್ ಬೇಷರತ್ತಾದ ಕದನ ವಿರಾಮವನ್ನು ಕೋರಿತು. ಆದರೆ, ಇದನ್ನು ನಿರಂತರ ತಿರಸ್ಕರಿಸುತ್ತಾ ಬಂದಿರುವ ರಷ್ಯಾ, ಯುದ್ಧ ಕೈದಿಗಳನ್ನು ವಿನಿಮಯ ಮಾಡಿಕೊಳ್ಳುವ ಒಪ್ಪಂದಕ್ಕೆ ಸಮ್ಮತಿಸಿತು.
'ಸಂಭವನೀಯ ಕದನ ವಿರಾಮದ ಬಗ್ಗೆ ಎರಡೂ ಕಡೆಯವರು ತಮ್ಮ ದೃಷ್ಟಿಕೋನವನ್ನು ತೆರೆದಿಟ್ಟಿದ್ದೇವೆ.
ಪುಟಿನ್ ಮತ್ತು ಝೆಲೆನ್‌ಸ್ಕಿ ನಡುವೆ ನೇರ ಮಾತುಕತೆಯ ಸಭೆಗೆ ಅವಕಾಶ ನೀಡುವಂತೆ ಉಕ್ರೇನ್ ಇಟ್ಟಿರುವ ಕೋರಿಕೆಯನ್ನು ರಷ್ಯಾ ಗಮನಿಸಿದೆ. ಒಟ್ಟಾರೆ ಈ ಮಾತುಕತೆಯ ಫಲಿತಾಂಶದಿಂದ ತೃಪ್ತಿ ಹೊಂದಿದ್ದೇವೆ. ಅಲ್ಲದೆ, ನಿರಂತರ ಸಂಪರ್ಕ ಮುಂದುವರಿಸಲು ನಾವು ಸಿದ್ಧರಿದ್ದೇವೆ' ಎಂದು ರಷ್ಯಾದ ಸಂಧಾನಕಾರ ವ್ಲಾದಿಮಿರ್ ಮೆಡಿನ್‌ಸ್ಕಿ ಹೇಳಿದ್ದಾರೆ.
ಉಕ್ರೇನ್ ಮುಖ್ಯ ಸಂಧಾನಕಾರರಾದ ರಕ್ಷಣಾ ಸಚಿವ ರುಸ್ತೆಮ್ ಉಮರೋವ್, ಪ್ರತ್ಯೇಕ ಹೇಳಿಕೆಯಲ್ಲಿ, ಕೈದಿಗಳ ವಿನಿಮಯವನ್ನು ದೃಢಪಡಿಸಿದರು. ಕದನ ವಿರಾಮ ಮತ್ತು ಸಂಭವನೀಯ ಅಧ್ಯಕ್ಷೀಯ ಸಭೆಯ ಬಗ್ಗೆ ಚರ್ಚಿಸಲಾಗಿದೆ ಎಂದೂ
ಹೇಳಿದರು.
ಹಕನ್ ಫಿದಾನ್ ಟರ್ಕಿಯ ವಿದೇಶಾಂಗ ವ್ಯವಹಾರಗಳ ಸಚಿವ ಉಭಯತ್ರರು ಮತ್ತೆ ಭೇಟಿಯಾಗಲು ತಾತ್ವಿಕವಾಗಿ ಒಪ್ಪಿಕೊಂಡಿದ್ದಾರೆ. ಕದನ ವಿರಾಮದ ವಿಚಾರಗಳನ್ನು ಲಿಖಿತ ರೂಪದಲ್ಲಿ ಪ್ರಸ್ತುತಪಡಿಸಲಾಗುವುದು
ಟರ್ಕಿ ಸಚಿವ ಫಿದಾನ್ ಮಧ್ಯಸ್ಥಿಕೆ
ಇಸ್ತಾಂಬುಲ್‌ನ ಡೊಲ್ಮಾಬಾಸ್ ಅರಮನೆಯ ಸಭಾಂಗಣದಲ್ಲಿ ಟರ್ಕಿಯ ವಿದೇಶಾಂಗ ವ್ಯವಹಾರಗಳ ಸಚಿವ ಹಕನ್ ಫಿದಾನ್ ರಷ್ಯಾ ಮತ್ತು ಉಕ್ರೇನ್ ನಿಯೋಗಗಳನ್ನು ಪರಸ್ಪರ ಮುಖಾಮುಖಿಯಾಗಿಸಿ ಮಾತುಕತೆಗೆ ಮಧ್ಯಸ್ಥಿಕೆ ವಹಿಸಿರುವ ದೃಶ್ಯಗಳು ಮಾಧ್ಯಮಗಳಲ್ಲಿ ಪ್ರಸಾರವಾಗಿವೆ. ಮಾತುಕತೆಗಳನ್ನು ವಿಫಲಗೊಳಿಸುವ ಪ್ರಯತ್ನದಲ್ಲಿ ರಷ್ಯಾ ತೊಡಗಿದ್ದು ಸ್ವೀಕಾರಾರ್ಹವಲ್ಲದ ಬೇಡಿಕೆಗಳನ್ನು ಮಾತುಕತೆಯ ವೇಳೆ ಮಂಡಿಸುತ್ತಿದೆ ಎಂದು ಉಕ್ರೇನ್ ಮೂಲವೊಂದು ಸುದ್ದಿಸಂಸ್ಥೆಗೆ ತಿಳಿಸಿದೆ.






