ಬದಿಯಡ್ಕ: ಹವಾಮಾನ್ಯ ವ್ಯೆಪರೀತ್ಯ ಅಡಿಕೆ ಕೃಷಿಕರನ್ನು ಕಂಗೆಡಿಸಿದೆ. ವಿವಿಧ ರೋಗಗಳಿಗೆ ಪ್ರತಿರೋಧ ಔಷಧಿಗಳ ಬಗ್ಗೆ ಕೃಷಿಕರಿಗೆ ಸ್ಪಷ್ಟ ಮಾಹಿತಿಗಳ ಕೊರತೆಯೂ ಇದೆ. ಈ ನಿಟ್ಟಿನಲ್ಲಿ ಕೇಂದ್ರೀಯ ತೋಟಗಾರಿಕ ಸಂಶೋಧನಾ ಕೇಂದ್ರ(ಸಿ.ಪಿ.ಸಿ.ಆರ್.ಐ) ವನ್ನು ಸಮರ್ಥವಾಗಿ ಬಳಸಬೇಕು. ತಂತ್ರಜ್ಞಾನಗಳು ಕೃಷಿಕರೆಡೆಗೆ ತಲುಪುವಲ್ಲೂ ಸಮಸ್ಯೆಗಳಿವೆ ಎಂದು ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು ತಿಳಿಸಿದರು.
ಕಿಸಾನ್ ಸೇನೆ ಜಿಲ್ಲಾ ಘಟಕದ ನೇತೃತ್ವದಲ್ಲಿ ಬದಿಯಡ್ಕದ ಗುರುಸದನದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಅಡಿಕೆ ಕೃಷಿಕರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಲೋಕದಲ್ಲೇ ಅತ್ಯುತ್ತಮ ಗುಣಮಟ್ಡದ ಅಡಿಕೆ ಬದಿಯಡ್ಕದ್ದು. ಮೊರೊಟೊರಿಯಂ, ಪ್ಯಾಕೇಜ್ ಇರಿಸಬೇಕು.ಕಾಸರಗೋಡು ಜಿಲ್ಲೆಯಲ್ಲಿ ಅಡಿಕೆ ಕೃಷಿಯು ಪ್ರಧಾನ ವಾಣಿಜ್ಯ ಬೆಳೆಯಾಗಿದ್ದು, ಸಾವಿರಾರು ಕುಟುಂಬಗಳು ಅಡಿಕೆ ಕೃಷಿಯನ್ನೇ ಅವಲಂಬಿಸಿ ತಮ್ಮ ನಿತ್ಯ ಜೀವನ ನಡೆಸುತ್ತಿದ್ದಾರೆ. ಆದರೆ ವಿವಿಧ ಕಾರಣಗಳಿಂದ ಅತಂತ್ರಕ್ಕೆ ಸಿಲುಕಿರುವ ಅಡಿಕೆ ಕೃಷಿಕರಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಸರ್ಕಾರದೊಂದಿಗೆ ನಿತ್ಯ ನಿರಂತರ ಕಾರ್ಯ ಯೋಜನೆಗಳು ಸಿದ್ದಗೊಂಡಿದೆ. ಈಗಾಗಲೇ ಅಡಿಕೆ ಕೃಷಿಕರ ಸಮಸ್ಯೆಗಳಿಗೆ ಸಂಬಂಧಿಸಿ ರಾಜ್ಯ ಕೃಷಿವರು ತಿಂಗಳ ಹಿಂದೆ ಸಮಾಲೋಚನೆ ಸಭೆ ನಡೆಸಿದ್ದು ಜಿಲ್ಲೆಯ ಐವರು ಶಾಸಕರೂ ಪಾಲ್ಗೊಂಡು ಸೂಚನೆಗಳನ್ನು ನೀಡಲಾಗಿದೆ. ವೈಜ್ಞಾನಿಕ ಜ್ಞಾನದಿಂದೊಡಗೂಡಿ ಇಂದು ಕೃಷಿ ನಡೆಸುವ ಅಗತ್ಯ ತುರ್ತು ಇದ್ದು, ಸ್ಥಳೀಯಾಡಳಿತ ಸಂಸ್ಥೆಗಳಿಗೂ ಜವಾಬ್ದಾರಿ ಇದೆ ಎಂದವರು ತಿಳಿಸಿದರು.
ಹವಾಮಾನ ವೈಪರೀತ್ಯದಿಂದಾಗಿ ಕೃಷಿ ವಲಯಕ್ಕೆ ಭಾರೀ ಆಘಾತ ಉಂಟಾಗಿದೆ. ಬೆಳೆ ಕುಸಿತದಿಂದಾಗಿ ಕೃಷಿಕರು ಕಂಗಾಲಾಗಿದ್ದಾರೆ. ಈ ನಿಟ್ಟಿನಲ್ಲಿ. ಬೆಲೆಯಲ್ಲಿ ಅನಿಶ್ಚಿತತೆ ಇರುವ ಅಡಿಕೆ ಮಾರುಕಟ್ಟೆಯಲ್ಲಿ ಸ್ಥಿರ ಬೆಲೆ ನೆಲೆಗೊಳಿಸಲು, ಏರಿಕೆ ಬೆಲೆಯ ಸಂದರ್ಭಗಳಲ್ಲಿ ಮಾರಾಟ ನಿರ್ವಹಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳುವ ನಿರೀಕ್ಷೆ ಇದೆ ಎಂದವರು ಭರವಸೆ ನೀಡಿದರು.
ಕಿಸಾನ್ ಸೇನೆ ಜಿಲ್ಲಾಧ್ಯಕ್ಷ ಕೆ.ಗೋವಿಂದ ಭಟ್ ಕೊಟ್ಟಂಗುಳಿ ಅಧ್ಯಕ್ಷತೆ ವಹಿಸಿದ್ದರು. ಕಿಸಾನ್ ಸೇನೆ ಮುಖ್ಯ ರಕ್ಷಾಧಿಕಾರಿ ಚಂದ್ರಶೇಖರ ರಾವ್ ಕಲ್ಲಗ ಪ್ರಾಸ್ತಾವಿಕವಾಗಿ ಮಾತನಾಡಿ ಅಡಿಕೆ ಕೃಷಿಕರ ಸಂಕಷ್ಟವನ್ನು ತೆರೆದಿಟ್ಟರು. ಕಾರಡ್ಕ ಬ್ಲಾ.ಪಂ.ಅಧ್ಯಕ್ಷ ಸಿಜಿ ಮ್ಯಾಥ್ಯೂ, ಬದಿಯಡ್ಕ ಗ್ರಾ.ಪಂ.ಅಧ್ಯಕ್ಷೆ ಶಾಂತಾ ಬಾರಡ್ಕ, ಕಾರಡ್ಕ ಬ್ಲಾ.ಪಂ.ಸದಸ್ಯ ಕುಂಞಂಬು ನಂಬ್ಯಾರ್, ಬದಿಯಡ್ಕ ಗ್ರಾ.ಪಂ.ಸದಸ್ಯ ಶ್ಯಾಮ ಪ್ರಸಾದ್ ಮಾನ್ಯ, ರಾಘವೇಂದ್ರ ಪಿ., ಜ್ಯೋತಿ ಕುಮಾರಿ ಕೆ.ಎನ್., ಮಾಹಿನ್ ಕೇಳೋಟ್ ಮುಖ್ಯ ಅತಿಥಿಗಳಾಗಿದ್ದರು.ಪದ್ಮಶ್ರೀ ಸತ್ಯನಾರಾಯಣ ಬೆಳೇರಿ ಮುಖ್ಯ ಅತಿಥಿಗಳಾಗಿದ್ದು, ಅಡಿಕೆ ಕೃಷಿಕರ ಮೇಲಿನ ನಿರಂತರ ಅವಗಣನೆ ಕೊನೆಗೊಳ್ಳಬೇಕು ಎಂದರು. ನಾಸಿರ್ ಚೆರ್ಕಳ, ಬಿ.ರಾಜೇಂದ್ರ ಪ್ರಸಾದ್ ಶುಭಹಾರೈಸಿದರು. ಕಾಸರಗೋಡು ಸಿಪಿಸಿಆರ್.ಐ. ವಿಜ್ಞಾನಿಗಳಾದ ಡಾ.ಆರ್. ತವಾ ಪ್ರಕಾಶ್ ಪಾಂಡ್ಯನ್ ಹಾಗೂ ಡಾ.ಚೈತ್ರ ಎಂ., ಅಜಿತ್ ಕುಮಾರ್, ತಳಿಯಮೋಳ್ ಉಪನ್ಯಾಸ ತರಗತಿ ನಡೆಸಿ ಕೃಷಿಕರೊಂದಿಗೆ ಸಂವಾದ ನಡೆಸಿದರು.
ಈ ಸಂದರ್ಭ ಕೊಳೆರೋಗ ಬಾಧಿಇಸ ಉದುರಿರುವ ಅಡಿಕೆಗಳನ್ನು ಪ್ರದರ್ಶಿಸಿ ಅಳಲು ತೋಡಲಾಯಿತು. ಸಮಾವೇಶ ಸಭಾಂಗಣದ ಬಾಗಿಲಿಗೆ ರೋಗಬಾಧಿಸಿದ ಅಡಿಕೆ ಗೊನೆಯನ್ನು ಪ್ರದರ್ಶಿಸಲಾಗಿತ್ತು. ಕಿಸಾನ್ ಸೇನೆ ಪ್ರಧಾನ ಕಾರ್ಯದರ್ಶಿ ಶುಕೂರ್ ಕಾನಾಜೆ ಸ್ವಾಗತಿಸಿ, ಜೊತೆ ಕಾರ್ಯದರ್ಶಿ ಸಚಿನ್ ಕುಮಾರ್ ಮಾಟೆಡ್ಕ ವಂದಿಸಿದರು. ಡಾ.ಸತೀಶ್ ಪುಣಿಚಿತ್ತಾಯ ಪೆರ್ಲ ನಿರೂಪಿಸಿದರು.




.jpg)
.jpg)
