HEALTH TIPS

ಸಿಂಧೂ ಜಲ ಒಪ್ಪಂದ ಅಮಾನತು: ನಿರ್ಧಾರ ಮರು ಪರಿಶೀಲಿಸುವಂತೆ ಭಾರತಕ್ಕೆ ಪಾಕ್ ಮನವಿ

ನವದೆಹಲಿ: ಸಿಂಧೂ ಜಲ ಒಪ್ಪಂದ ಅಮಾನತು ನಿರ್ಧಾರವನ್ನು ಮರು ಪರಿಶೀಲಿಸುವಂತೆ ಪಾಕಿಸ್ತಾನ ಮನವಿ ಮಾಡಿದೆ ಎಂದು ಮೂಲಗಳು ತಿಳಿಸಿವೆ.

ಪಾಕಿಸ್ತಾನದ ಜಲಸಂಪನ್ಮೂಲ ಕಾರ್ಯದರ್ಶಿ ಸೈಯ್ಯದ್ ಅಲಿ ಮುರ್ತಝಾ ಈ ಸಂಬಂಧ ಭಾರತದ ಜಲ ಶಕ್ತಿ ಸಚಿವಾಲಯದ ಕಾರ್ಯದರ್ಶಿ ದೇಬಶ್ರೀ ಮುಖರ್ಜಿಯವರಿಗೆ ಪತ್ರ ಬರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಲಕ್ಷಾಂತರ ಜನ ಸಿಂಧೂ ನದಿ ನೀರಿನ ಮೇಲೆ ಅವಲಂಬಿತರಾಗಿರುವುದರಿಂದ ನಿರ್ಧಾರವನ್ನು ಮರುಪರಿಶೀಲಿಸುವಂತೆ ಅವರು, ಪತ್ರದಲ್ಲಿ ಆಗ್ರಹಿಸಿದ್ದಾರೆ.

ಭಾರತದ ನಿರ್ಧಾರವನ್ನು ಏಕಪಕ್ಷೀಯ ಮತ್ತು ಕಾನೂನು ಬಾಹಿರ ಎಂದಿರುವ ಅವರು, ಇದು ಪಾಕಿಸ್ತಾನದ ಜನತೆ ಮತ್ತು ಆರ್ಥಿಕತೆಯ ಮೇಲಿನ ದಾಳಿ ಎಂದು ಆಪಾದಿಸಿದ್ದಾರೆ. ಅಲ್ಲದೇ ಈ ಬಗ್ಗೆ ಚರ್ಚಿಸಲು ತಮ್ಮ ಸರ್ಕಾರ ಸಿದ್ಧವಾಗಿದೆ ಎಂದೂ ಹೇಳಿದ್ದಾರೆ.

ಆದರೆ ಈ ಬೆಳವಣಿಗೆಯ ಬಗ್ಗೆ ಭಾರತ ಯಾವುದೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ. ಸದ್ಯ ಈ ನಿರ್ಧಾರದಲ್ಲಿ ಭಾರತದ ನಿಲುವು ಬದಲಾಗುವ ಸಾಧ್ಯತೆಯಿಲ್ಲ ಎಂದು ಮೂಲಗಳು ಹೇಳಿವೆ.

ಜಮ್ಮು ಮತ್ತು ಕಾಶ್ಮೀರವನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಗಡಿಯಾಚೆಗಿನ ಭಯೋತ್ಪಾದನೆಯಿಂದಾಗಿ ಒಪ್ಪಂದ ಅಮಾನತು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಭಾರತ ಪುನರುಚ್ಚರಿಸಿದೆ ಎನ್ನಲಾಗಿದೆ.

ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರು ನಡೆಸಿದ ದಾಳಿಗೆ ಪ್ರತ್ಯುತ್ತರವಾಗಿ ಭಾರತವು ಪಾಕಿಸ್ತಾನದ ಜೊತೆಗಿನ ಐತಿಹಾಸಿಕ ಸಿಂಧೂ ಜಲ ಒಪ್ಪಂದವನ್ನು ಭಾರತ ಅಮಾನತುಗೊಳಿಸಿತ್ತು.

ಏನಿದು ಸಿಂಧೂ ಜಲ ಒಪ್ಪಂದ:

ಸಿಂಧೂ ಜಲಾನಯನದ ವ್ಯಾಪ್ತಿಗೆ ಸೇರಿದ ನದಿಗಳು ಹಿಮಾಲಯದಲ್ಲಿ ಹುಟ್ಟಿ ಭಾರತ ಭೂಪ್ರದೇಶದಲ್ಲಿ ಹರಿದು ಪಾಕಿಸ್ತಾನದ ಮೂಲಕ ಅರಬ್ಬಿ ಸಮುದ್ರವನ್ನು ಸೇರುತ್ತದೆ. ಸಿಂಧೂ ಮತ್ತು ಅದರ ಜಲಾನಯನದ ವ್ಯಾಪ್ತಿಗೆ ಸೇರಿದ ಝೇಲಂ, ಚಿನಾಬ್, ರಾವಿ, ಬಿಯಾಸ್, ಸತ್ಲೇಜ್ ನದಿಗಳ ನೀರನ್ನು ಹಂಚಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಆರು ದಶಕಗಳ ಹಿಂದೆ ಒಪ್ಪಂದ ಏರ್ಪಟ್ಟಿತ್ತು.

ಸಿಂಧೂ ನದಿ ನೀರಿನ ಒಪ್ಪಂದ ಪ್ರಕಾರ ನದಿಯ ಒಡೆತನ ಪಾಕಿಸ್ತಾನಕ್ಕೆ ಸೇರಿದ್ದರೂ ಅದರ ಮೇಲೆ ಭಾರತದ ಸಿಂಹಪಾಲಿದೆ. 1948ರಲ್ಲಿ ಭಾರತವು ಪಾಕಿಸ್ತಾನಕ್ಕೆ ನೀರು ಹರಿಸುವುದನ್ನು ತಾತ್ಕಾಲಿಕವಾಗಿ ನಿಲ್ಲಿಸಿತು. ಇದರಿಂದಾಗಿ ಪಾಕಿಸ್ತಾನವು ವಿಶ್ವಸಂಸ್ಥೆಯ ಮೊರೆ ಹೋಯಿತು. ಇದರಿಂದಾಗಿ ವಿಶ್ವಬ್ಯಾಂಕ್ ಮಧ್ಯಸ್ಥಿಕೆಯಲ್ಲಿ ವಿವಾದ ಇತ್ಯರ್ಥಗೊಳಿಸಲು ವಿಶ್ವಸಂಸ್ಥೆ ಸೂಚಿಸಿತ್ತು. ಅನೇಕ ವರ್ಷಗಳ ಮಾತುಕತೆಯ ಬಳಿಕ 1960ರಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಯಿತು.

ವಿಶ್ವಬ್ಯಾಂಕ್ ಮಧ್ಯಸ್ಥಿಕೆಯಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವೆ ಸಿಂಧೂ ಜಲ ಒಪ್ಪಂದ ಸಾಕಾರಗೊಂಡಿತು. ಭಾರತದ ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂ ಮತ್ತು ಪಾಕಿಸ್ತಾನದ ಮಾಜಿ ಅಧ್ಯಕ್ಷ ಫೀಲ್ಡ್ ಮಾರ್ಷಲ್ ಅಯೂಬ್ ಖಾನ್, 1960ರ ಸೆಪ್ಟೆಂಬರ್ 19ರಂದು ಕರಾಚಿಯಲ್ಲಿ ಒಪ್ಪಂದಕ್ಕೆ ಸಹಿ ಹಾಕಿದ್ದರು.

ಒಪ್ಪಂದದ ಪ್ರಕಾರ ಭಾರತದಲ್ಲಿರುವ ಪೂರ್ವ ಭಾಗದ ಮೂರು ನದಿಗಳಾದ ಬಿಯಾಸ್, ರಾವಿ, ಸತ್ಲೇಜ್ ಮೇಲೆ ನಿಯಂತ್ರಣವನ್ನು ಹೊಂದಿದೆ. ಮತ್ತೊಂದೆಡೆ ಪಾಕಿಸ್ತಾನ ಪಶ್ಚಿಮದಲ್ಲಿ ಹರಿಯುವ ಸಿಂಧೂ, ಝೇಲಂ ಮತ್ತು ಚಿನಾಬ್‌ ನದಿಗಳ ಮೇಲೆ ಆ ದೇಶಕ್ಕೆ ಹೆಚ್ಚಿನ ಹಕ್ಕು ನೀಡಲಾಗಿದೆ. ಈ ನದಿಗಳ ಮೂಲ ಭಾರತದಲ್ಲಿ ಇರುವುದರಿಂದ ಇವುಗಳ ನೀರಿನ ಶೇ 20ರಷ್ಟನ್ನು ಭಾರತ ಬಳಸಬಹುದು. ಈ ನದಿಗಳಿಂದ ನೀರಾವರಿ ಹಾಗೂ ವಿದ್ಯುತ್ ಉತ್ಬಾದಿಸಲು ಭಾರತಕ್ಕೆ ಅವಕಾಶವಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries