HEALTH TIPS

ಮಸೂದೆಗಳ ಒಪ್ಪಿಗೆಗೆ SC ಗಡುವು: 14 ಸಾಂವಿಧಾನಿಕ ಪ್ರಶ್ನೆ ಕೇಳಿದ ರಾಷ್ಟ್ರಪತಿ

ನವದೆಹಲಿ: ರಾಜ್ಯ ಸರ್ಕಾರ ಅಂಗೀಕರಿಸಿದ ಮಸೂದೆಗಳಿಗೆ ರಾಜ್ಯಪಾಲರು ಮತ್ತು ರಾಷ್ಟ್ರಪತಿ ಅಂಕಿತ ಹಾಕಲು ಗಡುವು ನಿಗದಿಪಡಿಸಿದ ಸುಪ್ರೀಂ ಕೋರ್ಟ್‌ನ ಏ. 8ರ ಆದೇಶಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು 14 ಮಹತ್ವದ ಪ್ರಶ್ನೆಗಳನ್ನು ನ್ಯಾಯಾಲಯದ ಮುಂದಿಟ್ಟಿದ್ದಾರೆ.

ಬಹು ಅಪರೂಪವಾಗಿ ಬಳಸಲಾಗುವ ಸಂವಿಧಾನದ 143(1)ನೇ ವಿಧಿಯಡಿ ತಮ್ಮ ಅಧಿಕಾರವನ್ನು ಚಲಾಯಿಸಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, 'ಕಾನೂನಿನಡಿ ಕೆಲವೊಂದು ಪ್ರಶ್ನೆಗಳು ಉದ್ಭವಿಸಿವೆ. ಅವುಗಳು ಸಾರ್ವಜನಿಕರಿಗೆ ತೀರಾ ಮುಖ್ಯವಾಗಿದ್ದ ಇದರ ಕುರಿತು ಸುಪ್ರೀಂಕೋರ್ಟ್‌ನ ಅಭಿಪ್ರಾಯವನ್ನು ಬಯಸಿ ಕೇಳಲಾಗುತ್ತಿದೆ' ಎಂದಿದ್ದಾರೆ.

'ಕಾನೂನು ಅಥವಾ ವಾಸ್ತವದ ಕುರಿತು ರಾಷ್ಟ್ರಪತಿಗೆ ಪ್ರಶ್ನೆಗಳು ಉದ್ಭವಿಸಿದಲ್ಲಿ ಅಂಥ ಸ್ವರೂಪ ಮತ್ತು ಸಾರ್ವಜನಿಕ ಪ್ರಾಮುಖ್ಯತೆಯ ದೃಷ್ಟಿಯಿಂದ ಸುಪ್ರೀಂಕೋರ್ಟ್‌ನ ಅಭಿಪ್ರಾಯಪಡೆಯುವುದು ಸೂಕ್ತ ಎಂದು ಈ ವಿಧಿ ಹೇಳುತ್ತದೆ. ರಾಷ್ಟ್ರಪತಿ ಅವರು ತಮ್ಮ ಪ್ರಶ್ನೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಬಹುದು. ನಂತರ ಈ ಪ್ರಶ್ನೆಗಳು ಯೋಗ್ಯವೆನಿಸಿದರೆ ವಿಚಾರಣೆ ನಡೆಸಿ ಅದರ ವರದಿಯನ್ನು ಸುಪ್ರೀಂ ಕೋರ್ಟ್ ರಾಷ್ಟ್ರಪತಿ ಅವರಿಗೆ ಸಲ್ಲಿಸಲು ಅವಕಾಶವಿದೆ'.

ಸುಪ್ರೀಂಕೋರ್ಟ್‌ಗೆ ರಾಷ್ಟ್ರಪತಿ ಕೇಳಿರುವ ಪ್ರಶ್ನೆಗಳು

  • ಸಂವಿಧಾನದ 200ನೇ ವಿಧಿಯಡಿ ರಾಜ್ಯ ಸರ್ಕಾರ ಮಸೂದೆಯನ್ನು ಮಂಡಿಸಿದಾಗ ರಾಜ್ಯಪಾಲರಿಗ ಇರುವ ಸಾಂವಿಧಾನಿಕ ಆಯ್ಕೆಗಳು ಯಾವುವು?

  • ಸಂವಿಧಾನದ 200ನೇ ವಿಧಿಯಡಿ ರಾಜ್ಯ ಸರ್ಕಾರವು ಮಸೂದೆಯನ್ನು ಮಂಡಿಸಿದಾಗ, ಲಭ್ಯವಿರುವ ಎಲ್ಲಾ ಆಯ್ಕೆ ಹಾಗೂ ಅಧಿಕಾರಗಳನ್ನು ಚಲಾಯಿಸುವಾಗ ಸಚಿವ ಸಂಪುಟದ ಸಲಹೆಗಳಿಗೆ ರಾಜ್ಯಪಾಲರು ಬದ್ಧರೇ?

  • ಸಂವಿಧಾನದ 200ನೇ ವಿಧಿಯಡಿ ರಾಜ್ಯಪಾಲರು ಸಾಂವಿಧಾನ ವಿವೇಚನೆಯನ್ನು ಚಲಾಯಿಸುವುದು ನ್ಯಾಯಸಮ್ಮತವೇ?

  • ಸಂವಿಧಾನದ 361ನೇ ವಿಧಿಯು 200ನೇ ವಿಧಿಯಡಿಯಲ್ಲಿ ರಾಜ್ಯಪಾಲರು ಮಸೂದೆಯೊಂದನ್ನು ಮರುಪರಿಶೀಲನೆಗೆ ಕಳುಹಿಸುವ ಅಧಿಕಾರಕ್ಕೆ ತಡೆಯಾಗಿದೆಯೇ?

  • ಸಂವಿಧಾನದ 200ನೇ ವಿಧಿಯಡಿ ರಾಜ್ಯಪಾಲರು ತಮ್ಮ ಅಧಿಕಾರವನ್ನು ಚಲಾಯಿಸಲು ನ್ಯಯಾಲಯ ಕಾಲಮಿತಿಯನ್ನು ನಿಗದಿಪಡಿಸಬಹುದೇ ಮತ್ತು ಕಾರ್ಯವಿಧಾನಗಳನ್ನು ನಿರ್ದೇಶಿಸಬಹುದೇ?

  • ಸಂವಿಧಾನದ 201ನೇ ವಿಧಿಯಡಿ ರಾಷ್ಟ್ರಪತಿಯ ವಿವೇಚನಾಧಿಕಾರ ನ್ಯಾಯಾಂಗ ಪರಿಶೀಲನೆಗೆ ಒಳಪಟ್ಟಿದೆಯೇ?

  • ಸಂವಿಧಾನದ 201ನೇ ವಿಧಿಯಡಿ ರಾಷ್ಟ್ರಪತಿ ಅವರ ವಿವೇಚನಾಧಿಕಾರ ಚಲಾಯಿಸಲು ಕಾಲಮಿತಿ ಮತ್ತು ಕಾರ್ಯವಿಧಾನಗಳನ್ನು ನ್ಯಾಯಾಲಯದ ಆದೇಶಗಳು ವಿಧಿಸಲು ಅವಕಾಶವಿದೆಯೇ?

  • ರಾಷ್ಟ್ರಪತಿ ಅಂಕಿತಕ್ಕೂ ಪೂರ್ವದಲ್ಲಿ ಮಸೂದೆಯೊಂದನ್ನು ರಾಜ್ಯಪಾಲರು ತಡೆಹಿಡಿದಲ್ಲಿ ಸಂವಿಧಾನದ 143ನೇ ವಿಧಿಯಡಿ ರಾಷ್ಟ್ರಪತಿ ಸುಪ್ರೀಂ ಕೋರ್ಟ್‌ನ ಅಭಿಪ್ರಾಯಪಡೆಯುವುದು ಅಗತ್ಯವೇ?

  • ಸಂವಿಧಾನದ 200 ಹಾಗೂ 20ನೇ ವಿಧಿಯಡಿ ಒಂದು ಕಾನೂನು ಜಾರಿಯಾಗುವ ಹಂತದಲ್ಲಿ ಕ್ರಮವಾಗಿ ರಾಜ್ಯಪಾಲರ ಮತ್ತು ರಾಷ್ಟ್ರಪತಿಯ ನಿರ್ಧಾರಗಳು ಸಮರ್ಥನೀಯವೇ? ಮಸೂದೆಯೊಂದು ಕಾನೂನು ಆಗುವ ಹಂತದಲ್ಲಿ ನ್ಯಾಯಾಲಯಗಳು ನ್ಯಾಯಾಂಗ ನಿರ್ಣಯಗಳನ್ನು ಕೈಗೊಳ್ಳಲು ಅವಕಾಶವಿದೆಯೇ?

  • ಸಂವಿಧಾನದ 142ನೇ ವಿಧಿಯಡಿ ರಾಷ್ಟ್ರಪತಿ ಅಥವಾ ರಾಜ್ಯಪಾಲರ ಸಾಂವಿಧಾನಿಕ ಅಧಿಕಾರಗಳನ್ನು ನ್ಯಾಯಾಂಗ ಬದಲಿಸಲು ಅವಕಾಶವಿದೆಯೇ?

  • ಸಂವಿಧಾನದ 200ನೇ ವಿಧಿಯಡಿ ರಾಜ್ಯಪಾಲರ ಅಂಕಿತವಿಲ್ಲದೆ ರಾಜ್ಯದಲ್ಲಿ ಕಾನೂನು ಜಾರಿಗೆ ಬರಲಿದೆಯೇ?

  • ಸಂವಿಧಾನದ 145 (3) ವಿಧಿಯಡಿ ನ್ಯಾಯಾಲಯದ ಯಾವುದೇ ಪೀಠವು ಪ್ರಕರಣದ ಅರ್ಜಿಯಲ್ಲಿರುವ ಕೋರಿಕೆಯು ಸಂವಿಧಾನದ ವ್ಯಾಖ್ಯಾನಕ್ಕೆ ಒಳಪಟ್ಟಂತೆ, ಕಾನೂನಿನ ಗಣನೀಯ ಪ್ರಶ್ನೆಗಳನ್ನು ಒಳಗೊಂಡಿದೆಯೇ ಎಂಬುದನ್ನು ಮೊದಲು ನಿರ್ಧರಿಸಬೆಕಲ್ಲವೇ? ನಂತರ ಅದನ್ನು ಐವರು ನ್ಯಾಯಮೂರ್ತಿಗಳನ್ನೊಳಗೊಂಡ ಸಾಂವಿಧಾನಕ ಪೀಠಕ್ಕೆ ಶಿಫಾರಸು ಮಾಡಬೇಕಲ್ಲವೇ?

  • ಸಂವಿಧಾನದ 142ನೇ ವಿಧಿಯಡಿ ಸುಪ್ರೀಂ ಕೋರ್ಟ್‌ನ ಅಧಿಕಾರವು ಸಾಂವಿಧಾನಿಕ ಅಸ್ತಿತ್ವದಲ್ಲಿರುವ ಕಾರ್ಯವಿಧಾನಗಳ ವಿಷಯಗಳನ್ನು ಮೀರಿ ಅಥವಾ ಶಾಸನಬದ್ಧ ನಿಬಂಧನೆಗಳಿಗೆ ವಿರುದ್ಧವಾದ ನಿರ್ದೇಶನಗಳನ್ನು ನೀಡುವವರೆಗೆ ವಿಸ್ತರಿಸಿವೆಯೇ?

  • ಸಂವಿಧಾನದ 131ನೇ ವಿಧಿಯಡಿಯ ಲಭ್ಯವಿರುವ ಮಾರ್ಗವನ್ನು ಹೊರತುಪಡಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವಿನ ವ್ಯಾಜ್ಯಗಳನ್ನು ಪರಿಹರಿಸಲು ಸುಪ್ರೀಂಕೋರ್ಟ್‌ನ ಕಾರ್ಯವ್ಯಾಪ್ತಿಯನ್ನು ಸಂವಿಧಾನ ನಿರ್ಬಂಧಿಸಿದೆಯೇ?

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries