ಕಾಸರಗೋಡು: ಸಂಸತ್‍ಭವನದ ಸೆಂಟ್ರಲ್ ಹಾಲ್‍ನಲ್ಲಿ ಮೇ 9ರಂದು ನಡೆಯಲಿರುವ ರವೀಂದ್ರನಾಥ ಟಾಗೋರ್ ಸಂಸ್ಮರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ಭಾಷಣ ಮಾಡಲು ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿ ಅನುಶ್ರೀ ಆಯ್ಕೆಯಾಗಿದ್ದಾರೆ.
ಅನುಶ್ರೀ ಅವರು ರವೀಂದ್ರನಾಥ ಟ್ಯಾಗೋರ್ ಅವರ ಸ್ಮರಣಾರ್ಥ ಸಂಸತ್ತಿನಲ್ಲಿ ಭಾಷಣ ಮಾಡಲಿದ್ದಾರೆ. ರವೀಂದ್ರನಾಥ ಟಾಗೋರ್ ಅವರ ಜನ್ಮದಿನದಂದು ದೇಶದ ನಾನಾ ಉನ್ನತ ಶಿಕ್ಷಣ ಸಂಸ್ಥೆಗಳಿಂದ 12 ಮಂದಿಗೆ ಈ ಅವಕಾಶ ಲಭ್ಯವಾಗಿದೆ.
ಅನುಶ್ರೀ ಅವರು ಕೇರಳದಿಂದ ಆಯ್ಕೆಯಾಗಿರುವ ಏಕೈ ಅಭ್ಯರ್ಥಿಯಾಗಿದ್ದಾರೆ. ಕರ್ನಾಟಕ, ಜಾಖರ್ಂಡ್, ಮಧ್ಯಪ್ರದೇಶ, ಮಹಾರಾಷ್ಟ್ರ, ಮಣಿಪುರ, ಮಿಜೋರಾಂ, ನಾಗಾಲ್ಯಾಂಡ್, ದೆಹಲಿ ಮತ್ತು ಜಮ್ಮು ಮತ್ತು ಕಾಶ್ಮೀರದ ವಿದ್ಯಾರ್ಥಿಗಳು ಒಳಗೊಂಡಿದ್ದಾರೆ. ಪ್ರತಿಯೊಬ್ಬ ವಿದ್ಯಾರ್ಥಿಗೆ ಸೆಂಟ್ರಲ್ ಹಾಲ್‍ನಲ್ಲಿ ಮಾತನಾಡಲು ಎರಡು ನಿಮಿಷಗಳ ಕಾಲಾವಕಾಶ ನೀಡಲಾಗಿದೆ.
ಅನುಶ್ರೀ ವಡಗರ ಜಿಲ್ಲೆ ನಿವಾಸಿಯಾಗಿದ್ದಾರೆ. ಕೇಂದ್ರ ಶಿಕ್ಷಣ ಸಚಿವಾಲಯದ ಆಶ್ರಯದಲ್ಲಿರುವ ಪ್ರಜಾಪ್ರಭುತ್ವಗಳ ಸಂಸದೀಯ ಸಂಶೋಧನೆ ಮತ್ತು ತರಬೇತಿ ಸಂಸ್ಥೆ (ಪ್ರೈಡ್) ಹಾಗೂ ಲೋಕಸಭಾ ಸಚಿವಾಲಯದ ಸಹಯೋಗದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿದೆ.





