ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಯನ್ನು ತಿಳಿಗೊಳಿಸುವಂತೆ ಅಮೆರಿಕವು ಭಾರತ ಮತ್ತು ಪಾಕಿಸ್ತಾನಕ್ಕೆ ಮನವಿ ಮಾಡಿದೆ.
ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಮತ್ತು ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ್ದಾರೆ.
ಜೈಶಂಕರ್ ಅವರಿಗೆ ಬುಧವಾರ ರಾತ್ರಿ ಕರೆ ಮಾಡಿದ ರುಬಿಯೊ, 'ಪಹಲ್ಗಾಮ್ ದಾಳಿಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ನೆರವಾಗುವ ಅಮೆರಿಕದ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ' ಎಂದು ಅಮೆರಿಕ ವಿದೇಶಾಂಗ ಸಚಿವಾಲಯ ತಿಳಿಸಿದೆ.
ಶೆಹಬಾಜ್ ಷರೀಫ್ ಜತೆಗಿನ ದೂರವಾಣಿ ಸಂಭಾಷಣೆಯಲ್ಲಿ ರುಬಿಯೊ ಅವರು, 26 ನಾಗರಿಕರ ಸಾವಿಗೆ ಕಾರಣವಾದ ದಾಳಿಗೆ ಸಂಬಂಧಿಸಿದ ತನಿಖೆಗೆ ಪಾಕಿಸ್ತಾನವು ಸಹಕಾರ ನೀಡಬೇಕು ಎಂದು ಕೋರಿದ್ದಾರೆ.
'ಪಹಲ್ಗಾಮ್ ದಾಳಿ ಬಗ್ಗೆ ರುಬಿಯೊ ಜತೆ ಬುಧವಾರ ಚರ್ಚಿಸಲಾಗಿದೆ. ದಾಳಿ ನಡೆಸಿದ ಭಯೋತ್ಪಾದಕರು ಮತ್ತು ಎಲ್ಲ ಸಂಚುಕೋರರನ್ನು ಶಿಕ್ಷೆಗೆ ಗುರಿಪಡಿಸಬೇಕು' ಎಂದು ಜೈಶಂಕರ್ ಅವರು ಗುರುವಾರ 'ಎಕ್ಸ್'ನಲ್ಲಿ ಬರೆದಿದ್ದಾರೆ.
'ಉದ್ವಿಗ್ನತೆ ತಗ್ಗಿಸಲು ಮತ್ತು ದಕ್ಷಿಣ ಏಷ್ಯಾದಲ್ಲಿ ಶಾಂತಿ ಮತ್ತು ಭದ್ರತೆಯನ್ನು ಕಾಪಾಡಿಕೊಳ್ಳಲು ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಲು ರುಬಿಯೊ ಅವರು ಭಾರತಕ್ಕೆ ಮನವಿ ಮಾಡಿದರು' ಎಂದು ಅಮೆರಿಕದ ವಿದೇಶಾಂಗ ಇಲಾಖೆ ವಕ್ತಾರೆ ಟಾಮಿ ಬ್ರೂಸ್ ಹೇಳಿದ್ದಾರೆ.
'ಪಾಕ್ ಪ್ರಧಾನಿ ಜತೆಗಿನ ಮಾತುಕತೆಯಲ್ಲಿ, ಭಾರತದ ಜತೆ ನೇರ ಮಾತುಕತೆ ನಡೆಸಿ ಬಿಗುವಿನ ವಾತಾವರಣ ಕಡಿಮೆ ಮಾಡಬೇಕು ಮತ್ತು ದಕ್ಷಿಣ ಏಷ್ಯಾದಲ್ಲಿ ಶಾಂತಿ ಕಾಪಾಡಿಕೊಳ್ಳಬೇಕು ಎಂದು ಕೋರಿದರು. ದಾಳಿಯ ತನಿಖೆಗೆ ಸಹಕರಿಸುವಂತೆ ಪಾಕಿಸ್ತಾನದ ಅಧಿಕಾರಿಗಳಿಗೆ ಒತ್ತಾಯಿಸಿದರು' ಎಂದು ಬ್ರೂಸ್ ತಿಳಿಸಿದ್ದಾರೆ.
ಸತತ 7ನೇ ದಿನ ಕದನ ವಿರಾಮ ಉಲ್ಲಂಘನೆ
ಜಮ್ಮು: ಜಮ್ಮು ಮತ್ತು ಕಾಶ್ಮೀರದ ಮೂರು ಗಡಿ ಜಿಲ್ಲೆಗಳ ಹಲವು ವಲಯಗಳಲ್ಲಿ ಅಪ್ರಚೋದಿತ ಗುಂಡಿನ ದಾಳಿ ನಡೆಸುವ ಮೂಲಕ ಪಾಕಿಸ್ತಾನ ಸೇನೆಯು ಸತತ ಏಳನೇ ದಿನ ಕದನ ವಿರಾಮ ಉಲ್ಲಂಘಿಸಿದೆ. ದಿನ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಪಾಕ್ ನಡೆಸಿದ ದಾಳಿಗೆ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ಭಾರತ ಮತ್ತು ಪಾಕಿಸ್ತಾನ ಸೇನೆಗಳ ಕಾರ್ಯಾಚರಣೆ ಮಹಾನಿರ್ದೇಶಕರು ಮಂಗಳವಾರ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದರೂ ಎಲ್‌ಒಸಿಯಲ್ಲಿ ಗುಂಡಿನ ಚಕಮಕಿ ಮುಂದುವರಿದಿದೆ. 'ಬುಧವಾರ ರಾತ್ರಿ ಗಡಿ ನಿಯಂತ್ರಣ ರೇಖೆಯ ಕುಪ್ವಾರ ಉರಿ ಮತ್ತು ಅಖ್ನೂರ್ ಭಾಗಗಳಲ್ಲಿ ಪಾಕ್ ಸೇನೆಯಿಂದ ಅಪ್ರಚೋದಿತ ದಾಳಿ ನಡೆದಿದೆ' ಎಂದು ಸೇನೆಯ ವಕ್ತಾರರು ತಿಳಿಸಿದ್ದಾರೆ. ಉತ್ತರ ಕಾಶ್ಮೀರದ ಕುಪ್ವಾರ ಮತ್ತು ಬಾರಾಮುಲ್ಲಾ ಜಿಲ್ಲೆಗಳ ಎಲ್‌ಒಸಿಯುದ್ದಕ್ಕೂ ಗುಂಡಿನ ದಾಳಿ ಮೂಲಕ ಕದನ ವಿರಾಮ ಉಲ್ಲಂಘನೆ ಆರಂಭಿಸಿದ್ದ ಪಾಕ್ ಸೇನೆ ನಂತರದ ದಿನಗಳಲ್ಲಿ ಅದನ್ನು ಪೂಂಚ್ ಮತ್ತು ಜಮ್ಮುವಿನ ಅಖ್ನೂರ್ ಪ್ರದೇಶಗಳಿಗೆ ವಿಸ್ತರಿಸಿದೆ.




