ನವದೆಹಲಿ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭೀಕರ ಭಯೋತ್ಪಾದಕ ದಾಳಿ ನಡೆಸಿದ ಯಾರನ್ನೇ ಆಗಲಿ ಸುಮ್ಮನೆ ಬಿಡುವುದಿಲ್ಲ. ದಾಳಿಯಲ್ಲಿ ಭಾಗಿಯಾದ ಪ್ರತಿಯೊಬ್ಬನನ್ನು ಬೇಟೆಯಾಡುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ದೆಹಲಿ ಕೈಲಾಸ್ ಕಾಲೊನಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮರುನಾಮಕರಣಗೊಂಡಿರುವ ರಸ್ತೆ ಹಾಗೂ ಉಪೇಂದ್ರನಾಥ ಅವರ ಪ್ರತಿಮೆಯನ್ನು ಅಮಿತ್ ಶಾ ಅವರು ಅನಾವರಣ ಮಾಡಿದ್ದಾರೆ.
ಇದೇ ವೇಳೆ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿ ಕುರಿತು ಮಾತನಾಡಿದ ಅವರು, 'ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ದಾಳಿಕೋರರನ್ನು ಸುಮ್ಮನೆ ಬಿಡುವುದಿಲ್ಲ. ಜತೆಗೆ ನಮ್ಮ ದೇಶದಲ್ಲಿ ಭಯೋತ್ಪಾದನೆಯನ್ನು ಬೇರುಸಹಿತ ಕಿತ್ತುಹಾಕುವುದು ನಮ್ಮ ಸಂಕಲ್ಪವಾಗಿದ್ದು, ಅದನ್ನು ಸಾಧಿಸುತ್ತೇವೆ' ಎಂದು ಹೇಳಿದ್ದಾರೆ.
'140 ಕೋಟಿ ಭಾರತೀಯರು ಮಾತ್ರವಲ್ಲದೆ ಇಡೀ ಜಗತ್ತು ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಭಾರತದೊಂದಿಗೆ ನಿಂತಿದೆ. ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡುವವರೆಗೆ ನಮ್ಮ ಹೋರಾಟ ಮುಂದುವರಿಯುತ್ತದೆ. ಭಯೋತ್ಪಾದನೆಯಲ್ಲಿ ತೊಡಗಿರುವವರನ್ನು ಖಂಡಿತವಾಗಿಯೂ ಶಿಕ್ಷಿಸುತ್ತೇವೆ' ಎಂದು ಅವರು ತಿಳಿಸಿದ್ದಾರೆ.
'26 ಜನರನ್ನು ಕೊಂದು ಗೆಲುವು ಸಾಧಿಸಿದ್ದೇವೆ ಎಂದು ಭಾವಿಸಬೇಡಿ. ನಿಮ್ಮೆಲ್ಲರನ್ನೂ ಹೊಣೆಗಾರರನ್ನಾಗಿ ಮಾಡುತ್ತೇವೆ' ಎಂದು ಉಗ್ರ ಸಂಘಟನೆಗಳ ವಿರುದ್ಧ ಶಾ ಆಕ್ರೋಶ ಹೊರಹಾಕಿದ್ದಾರೆ.
'90ರ ದಶಕದಿಂದಲೂ ಕಾಶ್ಮೀರದಲ್ಲಿ ಭಯೋತ್ಪಾದನೆ ನಡೆಸುತ್ತಿರುವವರ ವಿರುದ್ಧ ನಾವು ಶೂನ್ಯ ಸಹಿಷ್ಣುತೆ ನೀತಿಯ ಆಧಾರದ ಮೇಲೆ ಬಲವಾಗಿ ಹೋರಾಟ ನಡೆಸುತ್ತಿದ್ದೇವೆ. ಇಂದು ಅವರು (ಉಗ್ರರು) ನಮ್ಮ ನಾಗರಿಕರನ್ನು ಕೊಲ್ಲುವ ಮೂಲಕ ಯುದ್ಧವನ್ನು ಗೆದ್ದಿದ್ದೇವೆ ಎಂದು ಭಾವಿಸಬಾರದು. ಇದು ಯುದ್ಧದ ಅಂತ್ಯವಲ್ಲ... ಪ್ರತಿಯೊಬ್ಬರಿಗೂ ಸೂಕ್ತ ಸಮಯದಲ್ಲಿ ಸೂಕ್ತ ಉತ್ತರ ನೀಡುತ್ತೇವೆ' ಎಂದು ಶಾ ಗುಡುಗಿದ್ದಾರೆ.




