ಕಾಸರಗೋಡು: ಮಡಿಯನ್ ನಲ್ಲಿ ಕೆರೆಯಲ್ಲಿ ಮುಳುಗಿ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ಮೃತರನ್ನು ಮಾಣಿಕೋತ್ ಅಜೀಜ್ ಅವರ ಪುತ್ರ ಅಫಾಸ್ ಮತ್ತು ಕೊಡಗು ಮೂಲದ ಆಶಿಮ್ ಎಂದು ಗುರುತಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಆಶಿಮ್ ಸಹೋದರ ಅನ್ವರ್ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗುರುವಾರ ಸಂಜೆ 4 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಮಡಿಯನ್ ಪಾಲಕ್ಕಿಯಲ್ಲಿರುವ ಹಳೆಯ ಪಳ್ಳಿ ಕೊಳದ ಬದಿ ಕುಳಿತಿದ್ದ ಮಕ್ಕಳು ಅಪಘಾತಕ್ಕೆ ಸಿಲುಕಿದ್ದಾರೆ. ಗುಂಪಿನಲ್ಲಿದ್ದ ಐದು ಮಕ್ಕಳಲ್ಲಿ ಒಬ್ಬನ ಶೂ ಕೊಳಕ್ಕೆ ಬಿದ್ದಾಗ ಹೆಕ್ಕಲು ಅವನು ಕೊಳಕ್ಕೆ ಹಾರಿದನು. ಅದನ್ನು ಎತ್ತಿಕೊಳ್ಳುವ ಪ್ರಯತ್ನದಲ್ಲಿ ಮೂವರು ಜಾರಿ ಬಿದ್ದರು. ಅಪಘಾತದ ಬಗ್ಗೆ ಇತರ ಇಬ್ಬರು ಮಕ್ಕಳು ಮಸೀದಿಯಲ್ಲಿದ್ದವರಿಗೆ ಮಾಹಿತಿ ನೀಡಿದರು. ಮಕ್ಕಳನ್ನು ತಕ್ಷಣ ದಡಕ್ಕೆ ತರಲಾಯಿತಾದರೂ, ಮಾಣಿಕೋತ್ ಅಜೀಜ್ ಅವರ ಮಗ ಅಫಾಸ್ ಮತ್ತು ಕೊಡಗು ಮೂಲದ ಹೈದರ್ ಅವರ ಮಗ ಆಶಿಮ್ ಸಾವನ್ನಪ್ಪಿದರು.
ಮಸೀದಿಗೆ ಬರುವವರಿಗೆ ಅವಕಾಶ ಕಲ್ಪಿಸಲು ಹಗಲಿನಲ್ಲಿ ಕೊಳದ ದ್ವಾರವನ್ನು ತೆರೆದಿಡಲಾಗುತ್ತದೆ. ಘಟನೆಗೆ ಸಂಬಂಧಿಸಿದಂತೆ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.





