HEALTH TIPS

ನೀಟ್‌-ಪಿಜಿ: ಸೀಟ್‌ ಬ್ಲಾಕಿಂಗ್ ಅಕ್ರಮದ ಬಗ್ಗೆ ಸುಪ್ರೀಂ ಕೋರ್ಟ್ ಕಳವಳ

ನವದೆಹಲಿ: ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ ಪ್ರವೇಶ ಪ್ರಕ್ರಿಯೆಯಲ್ಲಿ ಸೀಟ್ ಬ್ಲಾಕಿಂಗ್ ದಂಧೆಯು ವ್ಯಾಪಕವಾಗಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್‌, ಎಲ್ಲ ಖಾಸಗಿ ಕಾಲೇಜುಗಳು ಮತ್ತು ಡೀಮ್ಡ್‌ ವಿಶ್ವವಿದ್ಯಾಲಯಗಳು ನೀಟ್‌-ಪಿಜಿ ಪರೀಕ್ಷೆ ಸಂದರ್ಭದಲ್ಲಿ ಕೌನ್ಸೆಲಿಂಗ್‌ಗೂ ಮೊದಲು ಶುಲ್ಕ ವಿವರ ಬಹಿರಂಗಪಡಿಸುವುದು ಕಡ್ಡಾಯ ಎಂದು ಹೇಳಿದೆ.

ವಾಸ್ತವದಲ್ಲಿ ಲಭ್ಯವಿರುವ ಸೀಟುಗಳ ಸಂಖ್ಯೆಯು ಸೀಟು ಬ್ಲಾಕಿಂಗ್ ಅಕ್ರಮದ ಕಾರಣದಿಂದಾಗಿ ಸರಿಯಾಗಿ ತಿಳಿಯುವುದಿಲ್ಲ. ಇದು ಅಭ್ಯರ್ಥಿಗಳ ನಡುವೆ ಅಸಮಾನತೆ ಸೃಷ್ಟಿಯಾಗಲು ಕಾರಣವಾಗುತ್ತದೆ ಮತ್ತು ಪ್ರವೇಶ ಪ್ರಕ್ರಿಯೆಯು ಅರ್ಹತೆಗಿಂತಲೂ ಹೆಚ್ಚಾಗಿ ಅದೃಷ್ಟವನ್ನು ಆಧರಿಸುವಂತೆ ಮಾಡುತ್ತದೆ ಎಂದು ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದೀವಾಲಾ ಮತ್ತು ಆರ್. ಮಹಾದೇವನ್ ಅವರು ಇರುವ ಪೀಠವು ಹೇಳಿದೆ.

'ಸೀಟು ಬ್ಲಾಕಿಂಗ್ ಎಂಬುದು ಯಾವುದರ ಜೊತೆಯೂ ನಂಟು ಹೊಂದಿಲ್ಲದ ಅಕ್ರಮ ಅಲ್ಲ. ಅದು ವ್ಯವಸ್ಥೆಯಲ್ಲಿನ ಬಹಳ ಆಳವಾದ ಲೋಪಗಳನ್ನು, ಪಾರದರ್ಶಕತೆಯ ಕೊರತೆಯನ್ನು ಮತ್ತು ನೀತಿಗಳ ಅನುಷ್ಠಾನ ಪರಿಣಾಮಕಾರಿಯಾಗಿ ಇಲ್ಲದಿರುವುದನ್ನು ತೋರಿಸುತ್ತದೆ' ಎಂದು ಪೀಠವು ಏಪ್ರಿಲ್‌ 29ರಂದು ನೀಡಿರುವ ಆದೇಶದಲ್ಲಿ ಹೇಳಿದೆ.

ಅಖಿಲ ಭಾರತ ಕೋಟಾ ಮತ್ತು ರಾಜ್ಯ ಮಟ್ಟದ ಸುತ್ತುಗಳ ಜೊತೆ ಹೊಂದಿಕೊಳ್ಳುವಂತೆ ರಾಷ್ಟ್ರಮಟ್ಟದಲ್ಲಿ ಒಂದಕ್ಕೊಂದು ಪೂರಕವಾಗುವ ಕೌನ್ಸೆಲಿಂಗ್ ವೇಳಾಪಟ್ಟಿಯನ್ನು ಅನುಷ್ಠಾನಕ್ಕೆ ತರಬೇಕು ಎಂದು ಪೀಠವು ಸೂಚನೆ ನೀಡಿದೆ.

ಕೌನ್ಸೆಲಿಂಗ್‌ ನಡೆಯುವ ಮೊದಲೇ ಶುಲ್ಕ ವಿವರವನ್ನು ಪ್ರಕಟಿಸುವಾಗ ಬೋಧನಾ ಶುಲ್ಕ, ವಿದ್ಯಾರ್ಥಿ ನಿಲಯದ ಶುಲ್ಕ, ಠೇವಣಿಗಳು ಮತ್ತು ಇತರ ಶುಲ್ಕಗಳ ಬಗ್ಗೆ ವಿವರ ಒದಗಿಸಬೇಕು. ರಾಷ್ಟ್ರೀಯ ವೈದ್ಯಕೀಯ ಆಯೋಗದ ಅಧೀನದಲ್ಲಿ ಕೇಂದ್ರೀಕೃತ ಶುಲ್ಕ ನಿಯಂತ್ರಣ ಚೌಕಟ್ಟು ರೂಪಿಸಬೇಕು ಎಂದು ಕೋರ್ಟ್ ಹೇಳಿದೆ.

ಸೀಟು ಬ್ಲಾಕಿಂಗ್‌ನಲ್ಲಿ ಭಾಗಿಯಾದವರ ಠೇವಣಿ ಮುಟ್ಟುಗೋಲು ಹಾಕಿಕೊಳ್ಳಬೇಕು, ಭವಿಷ್ಯದ ನೀಟ್‌-ಪಿಜಿ ಪರೀಕ್ಷೆಗಳಿಂದ ಅನರ್ಹಗೊಳಿಸಬೇಕು ಹಾಗೂ ಅಕ್ರಮದಲ್ಲಿ ಭಾಗಿಯಾದ ಕಾಲೇಜುಗಳನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಎಂದು ಸೂಚನೆ ನೀಡಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries