ಕಾಸರಗೋಡು: ಅತಿಯಾದ ರಕ್ತಸ್ರಾವದ ಹಿನ್ನೆಲೆಯಲ್ಲಿ ಸಾವಿಗೀಡಾಗಿರುವ 16ರ ಹರೆಯದ ಬಾಲಕಿ ಸಾವಿನ ಬಗ್ಗೆ ನಿಗೂಢತೆ ಕಂಡುಬಂದಿದ್ದು, ಪ್ರಕರಣಕ್ಕೆ ಸಂಬಂಧಿಸಿ ಬಾಲಕಿಯ ಸಹಪಾಠಿಯನ್ನು ಕೇಂದ್ರೀಕರಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ವೆಳ್ಳರಿಕುಂಡು ಪೊಲೀಸ್ ಠಾಣೆ ವ್ಯಾಪ್ತಿಯ ಬಾಲಕಿಯನ್ನು ಅಸೌಖ್ಯದ ಹಿನ್ನೆಲೆಯಲ್ಲಿ ಕಾಞಂಗಾಡಿನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದ್ದು, ಪ್ರಾಥಮಿಕ ತಪಾಸಣೆಯಲ್ಲಿ ಬಾಲಕಿ ಗರ್ಭಿಣಿ ಎಂದು ಪತ್ತೆಹಚ್ಚಲಾಗಿತ್ತು. ಈ ಮಧ್ಯೆ ಬಾಲಕಿಗೆ ರಕ್ತಸ್ರಾವ ಕಮಡು ಬಂದ ಹಿನ್ನೆಲೆಯಲ್ಲಿ ಉನ್ನತ ಚಿಕಿತ್ಸೆಗಾಘಿ ಮಂಗಳೂರಿನ ಖಾಸಗಿ ಅಸ್ಪತ್ರೆಗೆ ಆಂಬುಲೆನ್ಸ್‍ನಲ್ಲಿ ಸಾಗಿಸುವ ಹಾದಿ ಮಧ್ಯೆ ಸಾವು ಸಂಭವಿಸಿತ್ತು. ಶವಮಹಜರು ವರದಿಯಲ್ಲಿ ನಾಲ್ಕುವರೆ ತಿಂಗಳ ಗರ್ಭಿಣಿ ಎಂದು ಖಚಿತಪಡಿಸಲಾಗಿತ್ತು. ಗರ್ಭಛಿದ್ರಕ್ಕಾಗಿ ಯಾವುದದರೂ ಔಷದ ಸೇವಿಸಿರುವ ಬಗ್ಗೆ ಸಂಶಯ ವ್ಯಕ್ತವಾಗಿದ್ದು, ಈ ಬಗ್ಗೆ ರಸಾಯನಿಕ ವರದಿ ಲಭಿಸಿದ ನಂತರವಷ್ಟೆ ಖಚಿತಪಡಿಸಿಕೊಳ್ಳಬೇಕಾಗಿದೆ. ಬಾಲಕಿ ಗರ್ಭಧರಿಸಲು ಕಾರಣನಾಗಿದ್ದನೆನ್ನಲಾದ ಸಹಪಾಠಿಯನ್ನು ಕೇಂದ್ರೀಕರಿಸಿ ತನಿಖೆ ನಡೆಸಲಾಗುತ್ತಿದೆ. ಬಾಲಕಿಯ ಅಸಹಜ ಸಾವಿನ ಬಗ್ಗೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.




