HEALTH TIPS

ಜಮ್ಮು-ಕಾಶ್ಮೀರದಲ್ಲಿ ಅಗತ್ಯವಸ್ತುಗಳ ಖರೀದಿಗೆ ಮುಗಿ ಬಿದ್ದ ಜನ!

ಶ್ರೀನಗರ: ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷದಿಂದಾಗಿ ಗಡಿಯಲ್ಲಿ ಉದ್ವಿಗ್ನತೆ ಹೆಚ್ಚುತ್ತಿದೆ. ಇತ್ತ ಜಮ್ಮು-ಕಾಶ್ಮೀರದಲ್ಲಿ ಆತಂಕ ಹೆಚ್ಚುತ್ತಿದ್ದು, ಜನರು ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದಿದ್ದಾರೆ.

ಸೇನೆಯ ನೆಲೆಗಳು ಹಾಗೂ ನಾಗರಿಕ ಪ್ರದೇಶಗಳನ್ನು ಗುರಿಯಾಗಿಸಿ ಪಾಕಿಸ್ತಾನ ಡ್ರೋನ್‌ ಹಾಗೂ ಫಿರಂಗಿಗಳಿಂದ ದಾಳಿ ಮುಂದುವರಿಸಿದ್ದು, ಜನರು ಭಯದಿಂದಲೇ ದಿನಗಳನ್ನು ಕಳೆಯುವಂತಾಗಿದೆ.

ಜಮ್ಮು ಮತ್ತು ಕಾಶ್ಮೀರದ ಹಲವಾರು ಪ್ರದೇಶಗಳಲ್ಲಿ ಜನರು ದಿನಸಿ, ಇಂಧನ ಸೇರಿದಂತೆ ನಿತ್ಯ ಬಳಕೆಯ ಹಾಗೂ ಅಗತ್ಯ ವಸ್ತುಗಳನ್ನು ಖರೀದಿಸುತ್ತಿದ್ದಾರೆ.

ಹೊಸದೇನಲ್ಲ: ಅಗತ್ಯ ವಸ್ತುಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳುವುದು ಕಾಶ್ಮೀರ ಕಣಿವೆ ಜನರಿಗೆ ಹೊಸದೇನೂ ಅಲ್ಲ. ಹಲವು ದಶಕಗಳಿಂದ ಕರ್ಫ್ಯೂ, ಸಂವಹನ ಸ್ಥಗಿತದಂತಹ ವಿದ್ಯಮಾನಗಳಿಗೆ ಈ ಪ್ರದೇಶ ಸಾಕ್ಷಿಯಾಗುತ್ತಲೇ ಬಂದಿದೆ.

ಹಿಂದಿನಿಂದಲೂ, ಪಾಕಿಸ್ತಾನ ನಡೆಸುವ ದಾಳಿಯ ಬಿಸಿ ಜಮ್ಮು ಪ್ರದೇಶಕ್ಕೆ ನೇರವಾಗಿ ತಟ್ಟಿಲ್ಲ. ಆದರೆ, ಈ ಬಾರಿ ನೆರೆ ರಾಷ್ಟ್ರದೊಂದಿಗಿನ ಸಂಘರ್ಷದ ಬಿಸಿ ಜಮ್ಮು ಪ್ರದೇಶಕ್ಕೆ ನೇರವಾಗಿ ತಟ್ಟುವ ಸಾಧ್ಯತೆಯೇ ಹೆಚ್ಚು. ಇದೇ ಕಾರಣಕ್ಕೆ ಈ ಪ್ರದೇಶದ ಜನರು ಕೂಡ ಅಗತ್ಯವಸ್ತುಗಳನ್ನು ಖರೀದಿಸಿ, ಸಂಗ್ರಹಿಸಿ ಇಟ್ಟುಕೊಳ್ಳಲು ಮುಂದಾಗಿದ್ದಾರೆ.

'ಕರ್ಫ್ಯೂಗಳು ಹಾಗೂ ಜನಜೀವನ ಸ್ತಬ್ಧವಾಗುವುದನ್ನು ಈ ಹಿಂದೆಯೂ ನೋಡಿದ್ದೇವೆ. ಇದೇ ಮೊದಲ ಬಾರಿಗೆ ಇಂತಹ ಆತಂಕದ ಸನ್ನಿವೇಶ ನೋಡುತ್ತಿದ್ದೇವೆ. ಜನರಲ್ಲಿ ಭೀತಿ ಆವರಿಸಿದೆ. ವದಂತಿಗಳದ್ದೇ ಕಾರುಬಾರು' ಎಂದು ಕಾಶ್ಮೀರದ ಗಾಂದರಬಲ್‌ನಲ್ಲಿ ಅಂಗಡಿ ನಡೆಸುತ್ತಿರುವ ವಾಹಿದ್ ರಾಥರ್ ಹೇಳುತ್ತಾರೆ.

ಜಮ್ಮುವಿನಲ್ಲಿ ಕೂಡ ಪರಿಸ್ಥಿತಿ ಭಿನ್ನವಾಗಿಲ್ಲ. 'ಈ ರೀತಿಯ ಪರಿಸ್ಥಿತಿಯನ್ನು ಎದುರಿಸುತ್ತೇವೆ ಎಂದು ನಾನು ಭಾವಿಸಿರಲಿಲ್ಲ' ಎಂದು ಗಡಿ ಜಿಲ್ಲೆ ಸಾಂಬಾ ನಿವಾಸಿ ರಾಕೇಶ್‌ ಶರ್ಮಾ ಹೇಳುತ್ತಾರೆ.

'ಡ್ರೋನ್‌ಗಳು ಅಪ್ಪಳಿಸುವ ಭೀತಿಯಿಂದಾಗಿ ದೀಪಗಳನ್ನು ಆರಿಸದ ಹೊರತು ಮಕ್ಕಳು ನಿದ್ದೆ ಮಾಡುವುದಿಲ್ಲ' ಎಂದೂ ರಾಕೇಶ್‌ ಹೇಳುತ್ತಾರೆ.

ಮಧ್ಯಾಹ್ನದ ಹೊತ್ತಿಗೆ ಅಕ್ಕಿ ಬೇಳೆಕಾಳುಗಳು ಎಣ್ಣೆ ಖಾಲಿಯಾಗುತ್ತವೆ. ಮೊಂಬತ್ತಿ ಮತ್ತು ಬ್ಯಾಟರಿಗಳು ಕೂಡ ಖರ್ಚಾಗಿ ಬಿಡುತ್ತವೆ

-ವಾಹಿದ್‌ ರಾಥರ್ ಕಾಶ್ಮೀರದ ಗಾಂದರಬಲ್‌ನ ಅಂಗಡಿ ಮಾಲೀಕ

ಸಾಕಷ್ಟು ಮುಂಜಾಗ್ರತೆ ಹಾಗೂ ಸಿದ್ಧತೆ ಅಗತ್ಯ. ಇದು ಕೇವಲ ಆಹಾರಕ್ಕೆ ಸಂಬಂಧಿಸಿದ್ದಲ್ಲ. ನಮ್ಮ ಸುರಕ್ಷತೆ ಬದುಕಿನ ಪ್ರಶ್ನೆ

-ಮೊಹಮ್ಮದ್‌ ಯಾಸಿನ್ ಅನಂತನಾಗ್‌ ನಿವಾಸಿ

ಒಂದು ತಿಂಗಳಿಗೆ ಸಾಕಾಗುವಷ್ಟು ಅಕ್ಕಿ ಬೇಳೆ ಮತ್ತಿತರ ದಿನಸಿಗಳನ್ನು ಸಂಗ್ರಹಿಸಿ ಇಟ್ಟುಕೊಂಡಿದ್ದೇವೆ. ಉದ್ವಿಗ್ನತೆ ಹೆಚ್ಚುತ್ತಿರುವ ಕಾರಣ ಆತಂಕ ಇದ್ದೇ ಇದೆ

-ರಾಕೇಶ್‌ ಶರ್ಮಾ ಸಾಂಬಾ ಜಿಲ್ಲೆ ನಿವಾಸಿ

ಪ್ರಮುಖ ಅಂಶಗಳು

* ಜಮ್ಮು-ಕಾಶ್ಮೀರದಾದ್ಯಂತ ಮಾರುಕಟ್ಟೆಗಳು ಸಂಜೆ 5 ಇಲ್ಲವೇ 5.30ರ ಹೊತ್ತಿಗೆ ಬಂದ್‌ ಆಗುತ್ತವೆ * ಕೆಲ ಪಟ್ಟಣಗಳಲ್ಲಿ ಸ್ಥಳೀಯ ಆಡಳಿತಗಳು ಅನಧಿಕೃತವಾಗಿಯೇ ಬ್ಲ್ಯಾಕ್‌ಔಟ್‌ ಜಾರಿ ಮಾಡಿವೆ. ಕತ್ತಲು ಆವರಿಸುತ್ತಿದ್ದಂತೆಯೇ ಬೀದಿ ದೀಪಗಳು ಹಾಗೂ ಜನವಸತಿ ಪ್ರದೇಶಗಳಲ್ಲಿ ದೀಪಗಳನ್ನು ಆರಿಸಲಾಗುತ್ತದೆ * ಆಹಾರ ಪದಾರ್ಥಗಳು ಇಂಧನ ಅಥವಾ ಯಾವುದೇ ಅಗತ್ಯ ವಸ್ತುಗಳ ಕೊರತೆ ಇಲ್ಲ ಎಂದು ಕೇಂದ್ರ ಸರ್ಕಾರ ಪದೇಪದೇ ಹೇಳಿದೆ. ಕೇಂದ್ರ ಸರ್ಕಾರದ ಈ ಮಾತು ಗಡಿ ಜಿಲ್ಲೆಗಳ ಜನರಲ್ಲಿ ತುಸು ನಿರಾಳತೆ ಮೂಡಿಸಿದೆ

'ಅಗತ್ಯವಸ್ತುಗಳ ಕೊರತೆ ಇಲ್ಲ'

ಜಮ್ಮು(ಪಿಟಿಐ): ಕೇಂದ್ರಾಡಳಿತ ಪ್ರದೇಶದಲ್ಲಿ ಆಹಾರ ಧಾನ್ಯಗಳು ಪೆಟ್ರೋಲಿಯಂ ಉತ್ಪನ್ನಗಳು ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಕೊರತೆ ಇಲ್ಲ. ಯಾರೂ ಆತಂಕಕ್ಕೆ ಒಳಗಾಗದೇ ಶಾಂತತೆಯಿಂದ ಇರಬೇಕು ಎಂದು ಜಮ್ಮು ಮತ್ತು ಕಾಶ್ಮೀರ ಸರ್ಕಾರ ಜನತೆಗೆ ಶನಿವಾರ ಮನವಿ ಮಾಡಿದೆ. ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಸತೀಶ್‌ ಶರ್ಮಾ ಅವರು ಈ ಮನವಿ ಮಾಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries