ನವದೆಹಲಿ: ಸುಪ್ರಿಯಾ ಸುಳೆ, ರವಿಕಿಶನ್ ಸೇರಿದಂತೆ 17 ಸಂಸದರು ಹಾಗೂ ಎರಡು ಸಂಸದೀಯ ಸಮಿತಿಗಳನ್ನು 'ಸಂಸದ ರತ್ನ-2025' ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಸುಪ್ರಿಯಾ ಸುಳೆ (ಎನ್‌ಸಿಪಿ- ಶರದ್ ಪವಾರ್ ಬಣ), ಎನ್.ಕೆ. ಪ್ರೇಮಚಂದ್ರನ್ (ಆರ್‌ಎಸ್‌ಪಿ), ಶ್ರೀರಂಗ ಅಪ್ಪ ಬಾರ್ನೆ ಹಾಗೂ ಭರ್ತೃಹರಿ ಮಹತಾಬ್ (ಬಿಜೆಪಿ) ಅವರು 'ಸಂಸದೀಯ ಪ್ರಜಾಪ್ರಭುತ್ವಕ್ಕೆ ನೀಡಿರುವ ಸುಸ್ಥಿರ ಕೊಡುಗೆ'ಗಾಗಿ ಆಯ್ಕೆಯಾಗಿದ್ದಾರೆ.
ಈ ನಾಲ್ವರು 16, 17ನೇ ಲೋಕಸಭೆಯಲ್ಲೂ ಉತ್ತಮ ಸಾಧನೆ ಮಾಡಿದ್ದರು ಎಂದು ಪ್ರಶಸ್ತಿ ಸ್ಥಾಪಿಸಿರುವ ಪ್ರೈಮ್ ಪಾಯಿಂಟ್ ಫೌಂಡೇಷನ್ ತಿಳಿಸಿದೆ.
ಬಿಜೆಪಿ ಸಂಸದರಾದ ಸ್ಮಿತಾ ವಾಘ್, ಮೇಧಾ ಕುಲಕರ್ಣಿ, ಪ್ರವೀಣ್ ಪಟೇಲ್, ರವಿಕಿಶನ್, ನಿಶಿಕಾಂತ್ ದುಬೆ, ಬಿದ್ಯುತ್ ಬರನ್ ಮಹಾತೊ, ಪಿ.ಪಿ. ಚೌಧರಿ, ಮದನ್ ರಾಥೋಡ್, ದಿಲೀಪ್ ಸೈಕಿಯಾ, ಶಿವಸೇನೆ- ಉದ್ಧವ್ ಬಣದ ಅರವಿಂದ ಸಾವಂತ್, ಶಿಂದೆ ಬಣದ ನರೇಶ್ ಗಣಪತ್ ಮಹಸ್ಕೆ, ಕಾಂಗ್ರೆಸ್‌ನ ವರ್ಷಾ ಗಾಯಕ್ವಾಡ್ ಹಾಗೂ ಡಿಎಂಕೆಯ ಸಿ.ಎನ್. ಅಣ್ಣಾದೊರೈ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಹಣಕಾಸು ಮತ್ತು ಕೃಷಿ ಇಲಾಖೆಯ ಎರಡು ಸ್ಥಾಯಿ ಸಮಿತಿಗಳು ಪ್ರಶಸ್ತಿಗೆ ಆಯ್ಕೆಯಾಗಿವೆ. ಮಹತಾಬ್ ಹಣಕಾಸು ಸಮಿತಿಗೆ ಹಾಗೂ ಚರಣ್‌ಜಿತ್ ಸಿಂಗ್ ಚನ್ನಿ ಕೃಷಿ ಸ್ಥಾಯಿ ಸಮಿತಿಗೆ ಅಧ್ಯಕ್ಷರಾಗಿದ್ದಾರೆ.
ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗದ (ಎನ್‌ಸಿಬಿಸಿ) ಅಧ್ಯಕ್ಷ ಹಂಸರಾಜ್ ಅಹಿರ್ ನೇತೃತ್ವದ ತೀರ್ಪುಗಾರರ ಸಮಿತಿಯು ಈ ಆಯ್ಕೆ ಮಾಡಿದೆ.






