ಕಾಸರಗೋಡು: ಕೇಂದ್ರೀಯ ಅಂತರ್ಜಲ ಮಂಡಳಿಯ ವಿಜ್ಞಾನಿ ಡಾ. ಪಂಕಜ್ ಬಾಕ್ಷೆ ಮೇ 14 ಮತ್ತು 15 ರಂದು ಜಿಲ್ಲೆಯ ವಿವಿಧೆಡೆ ಭೇಟಿ ನೀಡಲಿದ್ದಾರೆ. ಜಿಲ್ಲೆಯ ಅಂತರ್ಜಲ ಮರುಪೂರಣ ಯೋಜನೆಗಳ ಅವಲೋಕನ ನಡೆಸುವ ನಿಟ್ಟಿನಲ್ಲಿ ಭೇಟಿ ಆಯೋಜಿಸಲಾಗಿದೆ. ಅಂತರ್ಜಲಮಟ್ಟ ಗಣನೀಯವಾಗಿ ಕುಸಿದಿರುವ ಪ್ರದೇಶಗಳಿಗೆ ಭೇಟಿ ನೀಡಲಿದ್ದು, ಅಂತರ್ಜಲಮಟ್ಟ ಹೆಚ್ಚಿಸುವ ಬಗ್ಗೆ ಕೈಗೊಂಡಿರುವ ಯೋಜನೆಗಳನ್ನೂ ಪರಾಮರ್ಶಿಸುವರು.
ಭೇಟಿಯ ಪೂರ್ವಭಾವಿಯಾಗಿ ಜಿಲ್ಲೆಯ ಜಲ ಸಂರಕ್ಷಣಾ ಚಟುವಟಿಕೆಗಳನ್ನು ಪರಿಶೀಲಿಸುವ ನಿಟ್ಟಿನಲ್ಲಿ ಜಲ ಶಕ್ತಿ ಅಭಿಯಾನದ ಜಿಲ್ಲಾ ಮಟ್ಟದ ಸಭೆ ನಡೆಸಲಾಯಿತು. ಈ ಸಂದರ್ಭ ಜಿಲ್ಲೆಯ ಅಂತರ್ಜಲ ಸಂರಕ್ಷಣಾ ವ್ಯವಸ್ಥೆ ಮತ್ತು ಜಲಮರುಪೂರಣ ವ್ಯವಸ್ಥೆಯನ್ನು ಪರಿಶೀಲಿಸಲಾಯಿತು. ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಅಧ್ಯಕ್ಷತೆ ವಹಿಸಿದ್ದರು. ಭೂಗರ್ಭ ಜಲ ವಿಭಾಗ ಅಧಿಕಾರಿ ಅರುಣ್ ದಾಸ್ ಯೋಜನೆಯ ಬಗ್ಗೆ ವಿವರಿಸಿದರು. ಜಿಲ್ಲೆಯಲ್ಲಿ 640 ಪ್ರದೇಶಗಳಲ್ಲಿ ಅಂತರ್ಜಲಮಟ್ಟ ಕುಸಿದಿರುವ ಬಗ್ಗೆ ಅಧ್ಯಯನ ವರದಿ ತಿಳಿಸಿದ್ದು, ಈ ಪ್ರದೇಶಗಳನ್ನು ಕೇಂದ್ರ ಸರ್ಕಾರದ ಜೆಎಸ್‍ಜೆಪಿ ಪೋರ್ಟಲ್‍ನಲ್ಲಿ ನೋಂದಯಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಕಾಸರಗೋಡು ಬ್ಲಾಕಿನಲ್ಲಿರುವ ಕೊಳವೆಬಾವಿಗಳ ಪೈಕಿ 1868ಕೊಳವೆಬಾವಿಗಳಿಗೆ ಜಲಮರುಪೂರಣ ನಡೆಸುವ ಬಗ್ಗೆ ಮುಮದಿನ ಹತ್ತು ದಿವಸಗಳೊಳಗೆ ಯೋಜನೆ ತಯರಿಸಲಾಗುವುದು ಎಂದು ಅವರು ತಿಳಿಸಿದರು.






