ಮುಳ್ಳೇರಿಯ: ಮಾದಕ ದ್ರವ್ಯಗಳ ಉಪಯೋಗದ ವಿರುದ್ಧ ಆಲ್ ಕೇರಳ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಎಕೆಪಿಎ ಕಾಸರಗೋಡು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಗ್ರೂಪ್ ಫೋಕಸ್ ಕಾರ್ಯಕ್ರಮ ನಡೆಯಿತು. ಕಾಞಂಗಾಡಿನಲ್ಲಿ ಜರಗಿದ ಕಾರ್ಯಕ್ರಮವನ್ನು ಡಿವೈಎಸ್‍ಪಿ ಬಾಬು ಪೆರಿಂಗೋತ್ತ್ ಉದ್ಘಾಟಿಸಿ ಮಾತನಾಡಿ, ಯುವ ಸಮುದಾಯವು ಮಾದಕ ದ್ರವ್ಯಗಳ ಮೊರೆಹೋಗುತ್ತಿರುವುದು ಖೇದಕರ ವಿಚಾರವಾಗಿದೆ. ವಿದ್ಯಾರ್ಥಿಗಳನ್ನು ಗುರಿಯಾಗಿಸಿ ನಡೆಯುತ್ತಿರುವ ಮಾದಕ ದ್ರವ್ಯಗಳ ವ್ಯಾಪಾರವು ಇಂದು ಅತಿಯಾಗಿದೆ. ಹಣದ ಆಮಿಷವನ್ನು ನೀಡಿ ವಿದ್ಯಾರ್ಥಿಗಳನ್ನೇ ಇದಕ್ಕೆ ಬಳಕೆ ಮಾಡುತ್ತಿರುವುದು ಕಂಡುಬರುತ್ತಿದೆ. ಈ ನಿಟ್ಟಿನಲ್ಲಿ ಪೋಷಕರು ಹಾಗೂ ಸಾರ್ವಜನಿಕರು ಅತಿ ಜಾಗ್ರತೆ ವಹಿಸಬೇಕಾಗಿದೆ. ಅಂತಹ ವಿಚಾರಗಳು ಕಂಡುಬಂದಲ್ಲಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲು ಯಾರೂ ಹಿಂಜರಿಯಬಾರದು ಎಂದರು.
ಎಕೆಪಿಎ ಜಿಲ್ಲಾ ಅಧ್ಯಕ್ಷ ಸುಗುಣನ್ ಇರಿಯ ಅಧ್ಯಕ್ಷತೆ ವಹಿಸಿದ್ದರು. ಹೊಸದುರ್ಗ ಠಾಣಾಧಿಕಾರಿ ಪಿ. ಅಜಿತ್ ಕುಮಾರ್ ಮಾದಕ ದ್ರವ್ಯ ವಿರುದ್ಧ ಸಂದೇಶವನ್ನು ನೀಡಿದರು. ಜನಮೈತ್ರಿ ಬೀಟ್ ಆಫೀಸರ್ ಪ್ರದೀಪ್ ಕೊತ್ತೋಳಿ, ಪ್ರೆಸ್‍ಫೋರಂ ಕೋಶಾಧಿಕಾರಿ ಫಸಲ್ ರಹ್ಮಾನ್, ಎಕೆಪಿಎ ರಾಜ್ಯ ಉಪಾಧ್ಯಕ್ಷ ಸಜೀಶ್ ಮಣಿ, ರಾಜ್ಯ ಕಾರ್ಯದರ್ಶಿ ಹರೀಶ್ ಪಾಲಕುನ್ನು, ರಾಜ್ಯ ವನಿತಾ ವಿಂಗ್ ಕೋಓರ್ಡಿನೇಟರ್ ಪ್ರಶಾಂತ್ ತೈಕಡಪ್ಪುರಂ, ಜಿಲ್ಲಾ ಉಪಾಧ್ಯಕ್ಷರುಗಳಾದ ಅನೂಪ್ ಚಂದೇರ, ವಿ.ವಿ.ವೇಣು ಕುಂಬಳೆ, ಜಿಲ್ಲಾ ಜೊತೆ ಕಾರ್ಯದರ್ಶಿಗಳಾದ ಎನ್.ಕೆ.ಪ್ರಜಿತ್, ಕೆ.ಸುಧೀರ್, ರಾಜೀವ್, ಜಿಲ್ಲಾ ವೆಲ್ಫೇರ್ ಸಮಿತಿ ಅಧ್ಯಕ್ಷ ಶರೀಫ್, ಕಾಞಂಗಾಡು ವಲಯ ಅಧ್ಯಕ್ಷ ರಮೇಶ್ ಮಾವುಂಗಾಲ್, ಜಿಲ್ಲಾ ಕಾರ್ಯದರ್ಶಿ ವಿ.ಎನ್. ರಾಜೇಂದ್ರನ್ ಪಾಡಿ, ಜಿಲ್ಲಾ ಕೋಶಾಧಿಕಾರಿ ಸುನಿಲ್ ಕುಮಾರ್ ಪಿ.ಟಿ. ಮಾತನಾಡಿದರು.




