ಬದಿಯಡ್ಕ: ನಂಬಿಕೆಗಳು ಬಲಗೊಂಡಾಗ ನೆನೆದ ಕಾರ್ಯಗಳು ಸಿದ್ಧಿಯಾಗುತ್ತದೆ. ದೇವರ ಹಾಗೂ ದೇವಸ್ಥಾನದ ಮೇಲಿನ ನಮ್ಮ ವಿಶ್ವಾಸ ದೃಢವಾಗಿರಬೇಕು. ಊರಿನ ಜನರ ಒಗ್ಗಟ್ಟಿನ ಸಹಕಾರವಿದ್ದರೆ ಧಾರ್ಮಿಕ ಕ್ಷೇತ್ರಗಳು ಪುನರುತ್ಥಾನಗೊಂಡು ಮತ್ತೆ ವೈಭವದತ್ತ ಮೆರೆಯಲಿದೆ ಎಂದು ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ನುಡಿದರು.
ಗುರುವಾರ ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದಲ್ಲಿ ಜರಗಿದ ಧಾರ್ಮಿಕ ಸಮಾರಂಭವನ್ನು ದೀಪಬೆಳಗಿಸಿ ಉದ್ಘಾಟಿಸಿ ಅವರು ಆಶೀರ್ವಚನವನ್ನು ನೀಡಿದರು.
ಶಿವಶಕ್ತಿ ಪೆರಡಾಲ ಆಯೋಜಿಸಿದ ಶಿವಾರ್ಪಣಂ ನಿಧಿಕೂಪನ್‍ನ್ನು ಮಲ್ಲ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಶಶಿಧರ ಭಟ್ ಆನೆಮಜಲು ಬಿಡುಗಡೆಗೊಳಿಸಿ ಮಾತನಾಡಿ, ಶಿವಾರ್ಪಣಂ ಎಂಬ ಯೋಜನೆ, ಯೋಚನೆ ಸಾಕಾರಗೊಂಡು ಜೀರ್ಣೋದ್ಧಾರ ಕಾರ್ಯಕ್ಕೆ ನೆರವಾಗಲಿ ಎಂದರು.
ಶ್ರೀ ಉದನೇಶ್ವರ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವಸಂತ ಪೈ ಬದಿಯಡ್ಕ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪುತ್ತೂರಿನ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿ, ಎಲ್ಲರ ಅಳಿಲ ಸೇವೆ ಒಂದುಗೂಡಿದಾಗ ದೇವತಾನುಗ್ರಹ ಸಿದ್ಧಿಯಾಗಿ ನೆನೆದ ಕಾರ್ಯ ಕೈಗೂಡುತ್ತದೆ ಎಂದರು. ಉದ್ಯಮಿ ಬಲರಾಮ್ ಆಚಾರ್ಯ ಪುತ್ತೂರು ಮಾತನಾಡಿ ಧಾರ್ಮಿಕ ಕ್ಷೇತ್ರಗಳಲ್ಲಿ ಪಕ್ಷಬೇಧ, ಜಾತಿಬೇಧ ಮರೆತು ಹಿಂದೂಸಮಾಜವು ಒಗ್ಗಟ್ಟಾಗಿ ಮುಂದುವರಿಯುತ್ತದೆ. ನಮ್ಮ ಸಂಸ್ಕøತಿಯ ಮೇಲೆ ನಡೆಯುತ್ತಿರುವ ಆಕ್ರಮಣಕ್ಕೆದುರಾಗಿ ನಾವೆಲ್ಲ ಸೆಟೆದುನಿಲ್ಲಬೇಕು ಎಂದರು. ನ್ಯಾ.ಚಂದ್ರಶೇಖರ ರಾವ್ ಕೆ.ಎಸ್.ಕಾಸರಗೋಡು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡಿದರು. ಮಾಜಿ ಆಡಳಿತ ಮೊಕ್ತೇಸರ ಟಿ.ಕೆ.ನಾರಾಯಣ ಭಟ್, ಕರ್ನಾಟಕ ಬ್ಯಾಂಕ್ ಮಂಗಳೂರು ಮುಖ್ಯ ಪ್ರಬಂಧಕ ಶ್ರೀರಾಮ ಪ್ರಸಾದ ಮಾತೃಪ್ಪಾಡಿ, ಶಾಂತ ಕುಂಟಿನಿ, ಲಕ್ಷ್ಮೀನಾರಾಯಣ ನಾಯ್ಕ ಎಸ್., ದೈವಜ್ಞ ಶ್ರೀಕೃಷ್ಣಮೂರ್ತಿ ಪುದುಕೋಳಿ, ಅಧ್ಯಾಪಿಕೆ ಪ್ರಭಾವತಿ ಕೆದಿಲ್ಲಾಯ ಪುಂಡೂರು, ಜಯದೇವ ಖಂಡಿಗೆ, ಗೋಪಾಲ ಭಟ್ ಪಿ.ಎಸ್. ಪಟ್ಟಾಜೆ ಉಪಸ್ಥಿತರಿದ್ದರು. ಆಡಳಿತ ಮೊಕ್ತೇಸರ ವಕೀಲ ವೆಂಕಟ್ರಮಣ ಭಟ್ ಚಂಬಲ್ತಿಮಾರು ಸ್ವಾಗತಿಸಿ, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಜಗನ್ನಾಥ ರೈ ಪೆರಡಾಲಗುತ್ತು ವಂದಿಸಿದರು. ಯುವಸಮಿತಿ ಅಧ್ಯಕ್ಷ ಡಾ. ಶ್ರೀಶಕುಮಾರ ಪಂಜಿತ್ತಡ್ಕ ನಿರೂಪಿಸಿದರು. ಶ್ರೀ ಉದನೇಶ್ವರ ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿರಂಜನ್ ರೈ ಪೆರಡಾಲ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಪ್ರಸಾದ ಭೋಜನ, ಸಂಜೆ ದುರ್ಗಾಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಪ್ರಸಾದ ಭೋಜನ, ರಾತ್ರಿ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಹನುಮಗಿರಿ ಇವರಿಂದ ಯಕ್ಷಗಾನ ಬಯಲಾಟ ದ್ರೌಪದಿ ಸ್ವಯಂವರ-ಸೈಂಧವ ವಧೆ-ಶ್ರೀನಿವಾಸ ಕಲ್ಯಾಣ ಊರ ಹತ್ತುಸಮಸ್ಥರ ವತಿಯಿಂದ ನಡೆಯಿತು.




